ಜಿಲ್ಲೆ

2-4 ನೇ ಶನಿವಾರ ಕಬ್ಬನ್‌ಪಾರ್ಕ್ ಒಳಗೆ ವಾಹನ ಸಂಚಾರಕ್ಕೆ ಅನುವು

ಬೆಂಗಳೂರು: ತಿಂಗಳ 2 ಮತ್ತು 4ನೇ ಶನಿವಾರ ಕಬ್ಬನ್‌ಪಾರ್ಕ್ ಒಳಗೆ ವಾಹನ ಸಂಚಾರಕ್ಕೆ ಅನುವು ನೀಡಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದ್ದು, ಇದು ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ.


ಸಾರ್ವಜನಿಕ ಅನುಕೂಲಕ್ಕಾಗಿ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕಬ್ಬನ್‌ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ.


ಕಬ್ಬನ್‌ಪಾರ್ಕ್‌ನೊಳಗೆ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ. ಕಬ್ಬನ್‌ಪಾರ್ಕ್ ಒಳಗೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಹೊರಗಿನ ರಸ್ತೆಗಳಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರು ತಿಳಿಸಿದ್ದಾರೆ.


ಈ ಹಿಂದೆ ನಿಷೇಧಿಸಲಾಗಿತ್ತು:
ಕೆಲವು ವರ್ಷಗಳಿಂದ ಕಬ್ಬನ್ ಪಾರ್ಕ್‌ನೊಳಗೆ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಇತರ ಸಾರ್ವತ್ರಿಕ ರಜಾದಿನಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‌ನ ನೂರಕ್ಕೂ ಹೆಚ್ಚು ಸದಸ್ಯರು ಮತ್ತು ಕಬ್ಬನ್ ಪಾರ್ಕ್‌ಗೆ ನಿತ್ಯ ಭೇಟಿ ನೀಡುವವರು ಪಾರ್ಕ್‌ನೊಳಗೆ ಸಂಚಾರಕ್ಕೆ ಅವಕಾಶ ನೀಡುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ೨೦೨೩ ರ ಅಕ್ಟೋಬರ್‌ನಲ್ಲಿ ಪಾರ್ಕ್‌ನೊಳಗೆ ಸಂಚಾರಕ್ಕೆ ಅವಕಾಶ ನಿಷೇಧಿಸಲಾಗಿತ್ತು.


ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿ ವಿರೋಧ
ಪಾರ್ಕ್‌ನೊಳಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಆದೇಶಕ್ಕೆ ಇತ್ತೀಚೆಗೆ ರಚನೆಯಾಗಿರುವ ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿಯು ವಿರೋಧ ವ್ಯಕ್ತಪಡಿಸಿದೆ. ತೋಟಗಾರಿಕೆ ಇಲಾಖೆಯ ಉನ್ನತಾಧಿಕಾರಿಗಳು ಕಬ್ಬನ್ ಪಾರ್ಕ್‌ನ ನಿರ್ವಹಣೆ ಅಥವಾ ಪರಿಸರ ವ್ಯವಸ್ಥೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಮಿತಿ ದೂರಿದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಪಾರ್ಕ್‌ನೊಳಗೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವುದರಿಂದ ಕಬ್ಬನ್ ಪಾರ್ಕ್‌ಗೆ ಬರುವ ೩ ರಿಂದ ೫ ಸಾವಿರ ಮಂದಿಗೆ ತೊಂದರೆಯಾಗಲಿದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಏಕಪಕ್ಷೀಯ ನಿರ್ಧಾರ:
ಇನ್ನು ನಗರ ಸಂಚಾರ ಪೊಲೀಸರು ಇದನ್ನು ಪರಿಹಾರವೆಂದು ಪರಿಗಣಿಸಿದರೆ, ನಾಗರಿಕರು ಏಕಪಕ್ಷೀಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಉದ್ಯಾನದ ಗಾಳಿಯ ಗುಣಮಟ್ಟ ಮತ್ತು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂಭಾವ್ಯವಾಗಿ ಅಪಾಯಕ್ಕೆ ತಳ್ಳುತ್ತದೆ ಎಂದು ಆತಂಕವ್ಯಕ್ತಪಡಿಸಿರುವ ನಾಗರಿಕರು ವಾಹನ ರಹಿತ ಉದ್ಯಾನವನವಕ್ಕೆ ಒತ್ತಾಯಿಸಿದ್ದಾರೆ.