ಮಡಿಕೇರಿ: ವಿರಾಜಪೇಟೆ ತಾಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ ೧೬.೪೦ ರಲ್ಲಿ ರಸ್ತೆ ಬದಿ ಬಿರುಕು ಬಿಟ್ಟು ಕುಸಿಯುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸೆ.೯ ರವರೆಗೆ ವಿರಾಜಪೇಟೆ ತಾಲೂಕಿನ ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟೆಯ(ಸರಪಳಿ ಕಿ.ಮೀ ೧೬.೪೦ ತೋರ ಹತ್ತಿರ) ಕುಸಿದಿರುವ ಭಾಗದಲ್ಲಿನ ೪೦೦ ಮೀಟರ್ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.
ಸಾರ್ವಜನಿಕರು ತೋರ-ಕೆದಮುಳ್ಳೂರು-ಬೋಯಿಕೇರಿ ಮಾರ್ಗ, ತೋರ-ಹೆಗ್ಗಳ-ಆರ್ಜಿ ಮಾರ್ಗವಾಗಿ ಬದಲಿ ರಸ್ತೆ ಬಳಸಬಹುದಾಗಿದೆ. ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ ೧೯೮೮ರ ಸೆಕ್ಷನ್ ೧೧೬ ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು ೧೯೮೯ರಂತೆ ಅವಶ್ಯವಿರುವ ಸಂಜ್ಞೆ / ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.