ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ದ್ವಿಚಕ್ರ ವಾಹನ, ಆಟೋ ರಿಕ್ಷಾ ಸೇರಿದಂತೆ ಆರು ಮಾದರಿಯ ವಾಹನಗಳ ಸಂಚಾರವನ್ನು ನಿಷೇಧದ ನಿಯಮ ಆ.1ರಿಂದ ಜಾರಿಗೆ ಬರಲಿದೆ.
ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ವಾಹನಗಳ ವೇಗ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ನಿಧಾನವಾಗಿ ಸಾಗುವ ವಾಹನಗಳು ಅಪಘಾತಗಳಿಗೆ ಆಹ್ವಾನ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಮೂರು ಮಾರ್ಗಗಳಲ್ಲೂ ಒಂದೊಂದು ಮಾರ್ಗದಲ್ಲಿ ಒಂದೊಂದು ರೀತಿಯ ವೇಗಮಿತಿ ನಿಗದಿಪಡಿಸಲಾಗಿದೆ. ಮೊದಲ ಮಾರ್ಗಕ್ಕೆ ೬೦ ಕಿ.ಮೀ., ಎರಡನೇ ಮಾರ್ಗಕ್ಕೆ ೮೦ಕಿ.ಮೀ. ಹಾಗೂ ಮೂರನೇ ಮಾರ್ಗಕ್ಕೆ ೧೦೦ಕಿ.ಮೀ. ವೇಗ ಮಿತಿ ಹಾಕಲಾಗಿದೆ.
ವಾಹನಗಳ ವೇಗ ನಿಯಂತ್ರಿಸುವ ದೃಷ್ಟಿಯಿಂದ ಪೊಲೀಸರು, ಹೆದ್ದಾರಿಯ ಅಲ್ಲಲ್ಲಿ ಸ್ಪೀಡ್ ಹಂಟರ್ ಯಂತ್ರಗಳ ಮೂಲಕ ವಾಹನಗಳ ವೇಗವನ್ನು ಗುರುತಿಸಿ, ಓವರ್ ಸ್ಪೀಡ್‌ನಲ್ಲಿ ಸಂಚರಿಸುವ ವಾಹನಗಳಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ದಂಡ ಮೊತ್ತವನ್ನು ಟೋಲ್ ಪ್ಲಾಜಾಗಳ ಬಳಿ ಸಂಗ್ರಹಿಸಲಾಗುತ್ತಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಗರದ ಹೊರವಲಯದ ಶ್ರೀನಿವಾಸಪುರ ಬಳಿ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾ ಮತ್ತು ಯಂತ್ರವನ್ನು ಅಳವಡಿಸಿ, ಟ್ರಯಲ್ ರನ್ ಮಾಡಲಾಗುತ್ತಿದೆ.
ಇದು ಯಶಸ್ವಿಯಾದರೆ ಓವರ್‌ಸ್ಪೀಡ್‌ನಲ್ಲಿ ಸಂಚರಿಸುವ ವಾಹನಗಳಿಗೆ ಹಾಕುವ ದಂಡ ಮೊತ್ತವು ಆ ವಾಹನದ ಫಾಸ್ಟ್ಟ್ಯಾಗ್ ಮೂಲಕವೇ ಕಡಿತಗೊಳ್ಳಲಿದೆ. ಇದಲ್ಲದೆ ಅಪಘಾತ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಆರು ಮಾದರಿಯ ವಾಹನಗಳ ಸಂಚಾರವನ್ನು ಹೆದ್ದಾರಿಯಲ್ಲಿ ನಿರ್ಬಂಧಿಸಲಾಗಿದೆ.
ಯಾವ್ಯಾವ ವಾಹನಗಳಿಗೆ ನಿಷೇಧ?: ಮೋಟಾರ್ ಸೈಕಲ್‌ಗಳು, ತ್ರಿಚಕ್ರ ವಾಹನ, ಟ್ರ್ಯಾಕ್ಟರ್, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು, ಕ್ವಾಡ್ರಿ ಸೈಕಲ್‌ಗಳು, ಮೋಟಾರ್ ಅಲ್ಲದ ವಾಹನಗಳ(ಎತ್ತಿನಗಾಡಿ, ಟಾಂಗಾ ಹಾಗೂ ಇತರೆ) ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದರೆ ದಂಡ ಹಾಕಲು ಪೊಲೀಸರು ಸಜ್ಜಾಗಿದ್ದಾರೆ. ಈ ಸಂಬಂಧ ಹೈವೇ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ನಡೆಸಲಿದೆ.
ಸರ್ವೀಸ್ ರಸ್ತೆಗೆ ಜೀವಕಳೆ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಚಾಲನೆಯಾದ ಬಳಿಕ ಬಹುತೇಕರು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದರು. ಪರಿಣಾಮ ಸರ್ವೀಸ್ ರಸ್ತೆ ಬಿಕೋ ಎನ್ನುತ್ತಿತ್ತು. ಇದೀಗ ಹಲವು ವಾಹನಕ್ಕೆ ನಿಷೇಧ ವಿಧಿಸಿರುವುದರಿಂದ ಸರ್ವೀಸ್ ರಸ್ತೆಯತ್ತ ಮುಖ ಮಾಡಬೇಕಿದೆ. ಇದರಿಂದಾಗಿ ಹಳೆಯ ರಸ್ತೆಗೆ ಜೀವಕಳೆ ಬರಲಿದೆ.