ಜಿಲ್ಲೆ

ಹೆಚ್ಚುತ್ತಿವೆ ನಂಬರ್ ಪ್ಲೇಟ್ ಇಲ್ಲದ ವಾಹನಗಳು!

ಗಂಗಾಧರ ಬಿ ವಿ

* ನಿಯಮ ಉಲ್ಲಂಘಿಸುವವರಿಗೆ ರಹದಾರಿ

* ಪೊಲೀಸ್, ಸಾರಿಗೆ ಇಲಾಖೆ ಕ್ರಮವಿಲ್ಲ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಸಾರಿಗೆ ಇಲಾಖೆ ನಿಷ್ಕ್ರಿಯವಾದಂತಿದೆ.

ಬೈಕ್ ಸವಾರರಿಂದ ಆರಂಭಗೊಂಡ ದೊಡ್ಡ ಟ್ರಕ್‌ವರೆಗೂ ಹಲವು ವಾಹನಗಳು ನಂಬರ್ ಪ್ಲೇಟ್ ಇಲ್ಲದೆಯೇ ರಾಮನಗರದಾದ್ಯಂತ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸಾರಿಗೆ ಇಲಾಖೆ ಆಗಲಿ, ಪೊಲೀಸರಾಗಲಿ ಪ್ರಶ್ನೆ ಮಾಡದೇ ಇರುವುದು ಇಂತಹ ನಿಯಮ ಉಲ್ಲಂಘನೆ ಮಾಡುವವರಿಗೆ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ರಾಜಾರೋಷವಾಗಿ ವೇಗವಾಗಿಯೇ ವಾಹನಗಳನ್ನು ಓಡಾಡಿಸುತ್ತಿದ್ದು, ಇತರೆ ಪಾದಚಾರಿಗಳು ಮತ್ತು ಸಾರ್ವಜನಿಕರು ತೊಂದರೆ ಪಡುವಂತಾಗಿದೆ.

ಟ್ಯಾಂಕರ್‌ಗಳಿಗೂ ಇಲ್ಲ :

ಜಿಲ್ಲಾ ಕೇಂದ್ರ ರಾಮನಗರದಲ್ಲಿ ನೀರಿನ ಹಾಹಾಕಾರ ಇದೆ. ಇದರ ಲಾಭ ಪಡೆದುಕೊಂಡಿರುವ ಟ್ಯಾಂಕರ್ ಮಾಲೀಕರು ಮನೆ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಬಹುತೇಕ ಟ್ರಾೃಕ್ಟರ್‌ಗಳು ಮತ್ತು ನೀರಿನ ಟ್ಯಾಂಕರ್‌ಗಳಿಗೆ ನಂಬರ್‌ಗಳೇ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ಚಾಲಕರನ್ನು ವಿಚಾರಿಸಿದರೆ ನಮ್ಮ ಮಾಲೀಕರನ್ನು ಕೇಳಬೇಕು ಎನ್ನುವ ಉತ್ತರವನ್ನಷ್ಟೇ ನೀಡುತ್ತಾರೆ. ನಂಬರ್ ಪ್ಲೇಟ್ ಇಲ್ಲದ ಟ್ರಾೃಕ್ಟರ್‌ಗಳಾಗಲಿ, ಟ್ಯಾಂಕರ್‌ಗಳಾಗಲಿ ಪೊಲೀಸರ ಕಣ್ಣಿಗೆ ಕಾಣುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಯಾರು ಹೊಣೆ?

ನಂಬರ್ ಪ್ಲೇಟ್ ಇಲ್ಲದ ವಾಹನಗಳಿಂದ ಯಾವುದೇ ಅಪಘಾತ ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ನಗರ ಪ್ರದೇಶದ ಚಿಕ್ಕ ಚಿಕ್ಕ ಜಾಗದಲ್ಲಿಯೇ ನೀರಿನ ಟ್ಯಾಂಕರ್‌ಗಳನ್ನು ಹೊತ್ತ ಟ್ರಾೃಕ್ಟರ್‌ಗಳು ಸಂಚಾರ ಮಾಡುತ್ತಿವೆ. ಇವುಗಳ ತಿರುವು ಪಡೆಯುವಾಗಲೋ, ಹಿಂದಕ್ಕೆ ಚಲಿಸುವಾಗಲೋ ಅಪಘಾತಗಳು ಸಂಭವಿಸಿದರೆ ಯಾರನ್ನು ಹೊಣೆ ಮಾಡಬೇಕು ಎನ್ನುವುದಕ್ಕೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ. ಬೈಕ್ ಸವಾರರು ಅಪಘಾತ ಮಾಡಿ ನಿಲ್ಲಿಸದೇ ಹೋಗಿರುವ ಸಾಕಷ್ಟು ಉದಾಹಣೆಗಳು ಇವೆ.

ಕಳ್ಳರ ಬೈಕ್‌ಗೂ ನಂಬರ್ ಇಲ್ಲ

ಕಳೆದ ಮೂರ‌್ನಾಲ್ಕು ದಿನಗಳ ಹಿಂದೆ ರಾಮನಗರದ ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಕಳ್ಳತನ ಆಗಿತ್ತು. ಕಳ್ಳತನ ಮಾಡಲು ಬಂದವರು ಬಹುತೇಕ ಯುವಕರೇ ಆಗಿದ್ದು, ಇವರಲ್ಲಿ ಬಳಕೆ ಮಾಡಿದ್ದ ಒಂದು ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಕಳ್ಳರು ತಮ್ಮ ಎಲ್ಲ ಗುರುತುಗಳನ್ನು ಮುಚ್ಚಿಕೊಂಡೇ ಕಳ್ಳತನ ಮಾಡುತ್ತಾರಾದರೂ, ಆಗಾಗ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಪ್ರಾರಂಭಿಸಿದರೆ ನಿಯಮ ಉಲ್ಲಂಘನೆ ನಿಯಂತ್ರಿಸಬಹುದಾಗಿದೆ.

ಬ್ಯಾಂಕ್‌ಗಳ ಹೆದರಿಕೆ

ಲಭ್ಯ ಮಾಹಿತಿ ಪ್ರಕಾರ ಬೈಕ್ ಸೇರಿ ಇತರ ವಾಹನಗಳ ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಮಾಡುವ ಹಿಂದಿನ ಗುಟ್ಟು ಬ್ಯಾಂಕ್‌ಗಳು. ವಾಹನ ಖರೀದಿಗೆ ಸಾಲ ನೀಡುವ ಬ್ಯಾಂಕ್‌ಗಳು ನಂತರ ಸರಿಯಾದ ಸಮಯಕ್ಕೆ ಇಎಂಐ ಕಟ್ಟದಿದ್ದರೆ, ಹಣ ವಸೂಲಿಗೆ ಹಿಂದೆ ಬೀಳುತ್ತವೆ. ನಂಬರ್ ಪ್ಲೇಟ್ ಇದ್ದರೆ ಸಾಲ ವಸೂಲಿ ತಂಡಕ್ಕೆ ಸಿಕ್ಕಿ ಬೀಳುವ ಆತಂಕದಲ್ಲಿ ವಾಹನ ಸವಾರರು ನಂಬರ್ ಪ್ಲೇಟ್‌ಗಳನ್ನೇ ಕಳಚಿಟ್ಟು ವರ್ಷಗಟ್ಟಲೆ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಮತ್ತೊಂದು ರೀತಿಯ ಅಪಾಯ ತಂದೊಡ್ಡಿದೆ.

ಗಮನಹರಿಸಲಿ

ನಂಬರ್ ಪ್ಲೇಟ್ ಇಲ್ಲದ ವಾಹನಗಳು ಎಂದಿಗೂ ಸಮಾಜಕ್ಕೆ ಕಂಟಕವಾಗಿಯೇ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ನಿಯಂತ್ರಿಸುವ ಕೆಲಸಕ್ಕೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಬೇಕಿದೆ. ಹೆದ್ದಾರಿಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ನಗರ ಪ್ರದೇಶದ ಇತರೆ ಭಾಗಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಇಂತವರಿಗೆ ಬಿಸಿ ಮುಟ್ಟಿಸಬೇಕಿದೆ.

ನಂಬರ್ ಪ್ಲೇಟ್ ಇಲ್ಲದ ಟ್ಯಾಂಕರ್‌ಗಳನ್ನು ಹಿಡಿದರೆ ರಾಜಕೀಯ ವ್ಯಕ್ತಿಗಳಿಂದ ಫೋನ್ ಮಾಡಿಸಿ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಒತ್ತಡಕ್ಕೆ ಮಣಿದು ನಾವೂ ಸುಮ್ಮನೆ ಇರುವಂತೆ ಆಗಿದೆ.

ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ