ಜಿಲ್ಲೆ

ರಾಜ್ಯದಲ್ಲಿ ವಾಹನಗಳು 30 ದಿನ ನಿಂತಲ್ಲೇ ನಿಲ್ಲುವಂತಿಲ್ಲ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಕೀರ್ತಿನಾರಾಯಣ ಸಿ. ಬೆಂಗಳೂರು

ಸಾರ್ವಜನಿಕರ ತೆರಿಗೆ ದುಡ್ಡಲ್ಲಿ ಖರೀದಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ವಾಹನಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಾಖೆಗಳ ಆವರಣದಲ್ಲಿ ನಿಂತಲ್ಲೇನಿಂತು ತುಕ್ಕು ಹಿಡಿಯುತ್ತಿವೆ! ಇನ್ನುಮುಂದೆ ಈ ಉದಾಸೀನತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೆಜ್ಜೆಯಿಟ್ಟಿದ್ದು, ಸೂಕ್ತ ಕಾರಣವಿಲ್ಲದೆ ವಾಹನವನ್ನು 30 ದಿನಗಳವರೆಗೆ ಓಡಿಸದೆ ನಿಲ್ಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಅಂದಾಜಿನ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ವಾರ್ಷಿಕ 40ರಿಂದ 60 ಲಕ್ಷ ರೂ.ವರೆಗಿನ ಸರ್ಕಾರಿ ವಾಹನಗಳು ಹಾಳಾಗುತ್ತಿವೆ. ಸಣ್ಣಪುಟ್ಟ ರಿಪೇರಿ ಬಂದರೂ ಸರಿಪಡಿಸಿಕೊಳ್ಳುತ್ತಿಲ್ಲ. ಹಲವು ವರ್ಷ ಬಳಸಿಕೊಳ್ಳಬಹುದಾದ ಪರಿಸ್ಥಿತಿಯಲ್ಲಿದ್ದರೂ ಪಕ್ಕಕ್ಕೆ ನಿಲ್ಲಿಸಿ ಹಾಳು ಮಾಡಲಾಗುತ್ತಿದೆ. ಬೇರೆಲ್ಲ ಇಲಾಖೆಗಳಿಗೆ ಹೋಲಿಸಿಕೊಂಡರೆ, ಪೊಲೀಸ್ ಇಲಾಖೆಯಲ್ಲಿ ನಿಂತಲ್ಲೇ ನಿಂತು ಕರಗುವ ವಾಹನಗಳ ಸಂಖ್ಯೆ ಜಾಸ್ತಿ.

ಸಮರ್ಪಕ ಕಾರಣವಿಲ್ಲದೆ ಯಾವುದೇ ವಾಹನ 30 ದಿನಗಳಿ ಗಿಂಥ ಹೆಚ್ಚು ಕಾಲ ಬಳಕೆಯಾಗದೆ ನಿಲ್ಲುವಂತಿಲ್ಲ. ಸಣ್ಣ-ಪುಟ್ಟ ರಿಪೇರಿ ಇದ್ದರೆ ಮಾಡಿಸಿಕೊಂಡು ಬಳಸಬೇಕು. ಇಲ್ಲವಾದರೆ ಆರ್​ಟಿಒ ಅಧಿಕಾರಿಗಳಿಂದ ದರ ನಿಗದಿಪಡಿಸಿ ಹರಾಜು ಹಾಕಿ ಖಜಾನೆಗೆ ಹಣ ಜಮೆ ಮಾಡಬೇಕು. ವಾಹನ ನಿರ್ವಹಣೆ ಕುರಿತು ಪ್ರತಿತಿಂಗಳು ವರದಿ ಸಲ್ಲಿಸಬೇಕು. ತಪ್ಪಿದರೆ ಆಯಾ ಘಟಕಗಳ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಎಂದು ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ ಕೊಟ್ಟಿದ್ದಾರೆ.

ಒಂದು ಠಾಣೆಗೆ ಕನಿಷ್ಠ 10 ವಾಹನ: ಬೆಂಗಳೂರಿನಲ್ಲಿ 120 ಲಾ ಆಂಡ್ ಆರ್ಡರ್ ಠಾಣೆಗಳು ಹಾಗೂ 44 ಟ್ರಾಫಿಕ್ ಠಾಣೆಗಳು ಸೇರಿ 164 ಠಾಣೆಗಳಿವೆ. ಸಿಸಿಬಿ, ಲಾ ಆಂಡ್ ಆರ್ಡರ್, ಟ್ರಾಫಿಕ್, ಕಮಾಂಡ್ ಸೆಂಟರ್, ವಿವಿಐಪಿ ಸೇರಿ 22 ಡಿಸಿಪಿ ಕಚೇರಿಗಳಿವೆ. 67 ಎಸಿಪಿ ಕಚೇರಿಗಳಿವೆ. ಪ್ರತಿಯೊಂದು ಠಾಣೆಗೂ ಗಸ್ತು ತಿರುಗಲು ಎಸ್​ಐಗಳಿಗೆ ಚೀತಾ ಬೈಕ್, ಹೊಯ್ಸಳ, ಜೀಪ್, ಟಾಟಾ ಸುಮೋ ಸೇರಿ ಕನಿಷ್ಠ 10 ವಾಹನಗಳನ್ನು ನೀಡಲಾಗಿದೆ.

ಡಿಜಿಪಿ ಆದೇಶವೇನು?

  • ಕೆಟ್ಟಿರುವ ವಾಹನ 2 ತಿಂಗಳು ರಿಪೇರಿಗೆ ಕಳುಹಿಸದಿದ್ದರೆ ಅದು ಗಂಭೀರ ಅಪರಾಧ
  • ವಾಹನ ತಯಾರಿಕಾ ವರ್ಷ, ಇಂಜಿನ್ ಪರಿಸ್ಥಿತಿ ಆಧರಿಸಿ ಗುಜರಿಗೆ ಹಾಕಲು ಅನುಮತಿ
  • ವಾಹನ ವಿಲೇವಾರಿಗೆ ಅನುಮತಿ ಸಿಕ್ಕ 2 ತಿಂಗಳಲ್ಲಿ ಹರಾಜು ಪ್ರಕ್ರಿಯೆ ಮುಗಿಸಬೇಕು
  • ಆರ್​ಟಿಒ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬಿಡ್ ಮಾಡಿದವರಿಗೆ ವಾಹನ ಕೊಡಬೇಕು
  • ನಿಗದಿತ ಅವಧಿಯಲ್ಲಿ ಬಿಡ್​ದಾರ ವಾಹನ ಪಡೆಯದಿದ್ದರೆ ಆತನ ಠೇವಣಿ ಹಣ ವಶಕ್ಕೆ

ಟೈರು, ಇಂಜಿನ್ ಮಾಯ

ಪ್ರತಿಯೊಂದು ಇಲಾಖೆಗಳಲ್ಲೂ ವಾಹನ ಚಾಲನೆಗಾಗಿ ಪ್ರತ್ಯೇಕ ಚಾಲಕರನ್ನು ಸರ್ಕಾರವೇ ನೇಮಕ ಮಾಡಿದೆ. ವಾಹನ ನಿರ್ವಹಣೆ ಜವಾಬ್ದಾರಿ ಚಾಲಕರದ್ದೇ ಆಗಿರುತ್ತದೆ. ಪಂಕ್ಚರ್ ಆದರೆ, ಸಣ್ಣ ಬೋಲ್ಟ್ ಹೋದರೂ ದುರಸ್ತಿ ಮಾಡಿಸದೆ ಪಕ್ಕಕ್ಕೆ ನಿಲ್ಲಿಸುತ್ತಾರೆ. ಹಾಗೇ ನಿಲ್ಲಿಸಿದ ವಾಹನಗಳಲ್ಲಿ ರಾತ್ರೋರಾತ್ರಿ ಇಂಜಿನ್, ಟೈರ್ ಕಳವು ಮಾಡಲಾಗುತ್ತದೆ ಎಂಬ ಆರೋಪವೂ ಇದೆ.

ಹಳೇ ವಾಹನಗಳೆಲ್ಲ ಹಾಳು!

2016ರಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಯ್ಸಳ ವಾಹನ ಗಳನ್ನು ಗಸ್ತಿಗಾಗಿ ಠಾಣೆಗಳಿಗೆ ನೀಡಲಾ ಯಿತು. ಅದಕ್ಕೂ ಮುಂಚೆ ಇದ್ದಂಥ ಹೊಯ್ಸಳ ವಾಹನಗಳು ಹಾಗೂ ಕಾರುಗಳು, ಬೈಕ್​ಗಳು ಠಾಣೆ ಆವರಣದಲ್ಲೇ ನಿಂತು ತುಕ್ಕು ಹಿಡಿದಿವೆ. ಸರ್ವೀಸ್ ಮಾಡಿಸಿ ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳೇ ಹೇಳುತ್ತಾರೆ.

ಇಲಾಖೆಯಲ್ಲಿರುವ ಸಾಕಷ್ಟು ವಾಹನಗಳು ಸುಸ್ಥಿತಿಯಲ್ಲಿದ್ದರೂ ನಿಂತಲ್ಲೇ ನಿಂತು ಹಾಳಾಗಿವೆ. ಎಲ್ಲ ವಾಹನಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಡಿಜಿಪಿ ಈ ಆದೇಶ ಹೊರಡಿಸಿದ್ದಾರೆ. ಪ್ರತಿ ತಿಂಗಳು ವರದಿ ಪಡೆದು ವಾಹನಗಳ ನಿರ್ವಹಣೆ ಗಮನಿಸಲಾಗುತ್ತದೆ. | ವೇದೇಶ್ ಕುಮಾರ್ ಎಸ್ಪಿ (ವಾಹನ ಸಾರಿಗೆ ವಿಭಾಗ)