ಮೈಸೂರು: ಕಸದಿಂದ ಉಂಟಾಗುತ್ತಿರುವ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಹಳೇ ಕೆಸರೆ ಘನತ್ಯಾಜ್ಯ ಹಾಗೂ ಸಂಸ್ಕರಣಾ ಘಟಕದ ಬಳಿ ಸುತ್ತಮುತ್ತಲ ನಿವಾಸಿಗಳು, ಜನಸ್ಪಂದನ ಹಿತರಕ್ಷಣಾ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಕಸ ತುಂಬಿದ ವಾಹನಗಳನ್ನು ಭಾನುವಾರ ವಾಪಸ್ ಕಳುಹಿಸಿದರು.
ಹಳೇ ಕೆಸರೆಯ ಶಿಕ್ಷಕರ ಬಡಾವಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶ ಜನರಿಗೆ ಕಸದಿಂದ ತೊಂದರೆ ಆಗುತ್ತಿದೆ. ಈಗ ಹೆಚ್ಚುವರಿಯಾಗಿ ಸೂಯೇಜ್ ಫಾರ್ಮ್ ಕಸವನ್ನು ತಂದು ಹಳೆ ಕೆಸರೆ ಘಟಕಕ್ಕೆ ಸುರಿಯಲಾಗುತ್ತಿದೆ. ಇದರಿಂದ ಮೊದಲೇ ಸಮಸ್ಯೆಯಲ್ಲಿರುವ ಜನರಿಗೆ ಮತ್ತಷ್ಟು ಸಮಸ್ಯೆ ಅಗಲಿದೆ ಎಂದು ನಿವಾಸಿಗಳು ದೂರಿದರು.
ಘಟಕದಿಂದ ಹೊರ ಸೂಸುತ್ತಿರುವ ದುರ್ನಾತದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿದಾಗ ಹಿಂದಿನಂತೆ ಹಳೆಯ ಕೆಸರೆ ಘಟಕಕ್ಕೆ ಬರುತ್ತಿದ್ದ ಕಸವನ್ನು ಮಾತ್ರ ಹಾಕಲಾಗುವುದು ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಭರವಸೆ ನೀಡಿದ್ದರು. ಆದರೆ ಮರು ದಿನವೇ ಹೆಚ್ಚುವರಿಯಾಗಿ ಎರಡು ದೊಡ್ಡ ಟ್ರಕ್ ಹಾಗೂ 22 ಮಿನಿ ಟೆಂಪೋಗಳಲ್ಲಿ ಕಸ ತುಂಬಿಸಿ ತರಲಾಗಿದೆ ಎಂದು ದೂರಿದರು.
ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಬಂದ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪದಿದ್ದಾಗ ಕಸ ತುಂಬಿದ ವಾಹನಗಳನ್ನು ವಾಪಸ್ ಕಳುಹಿಸಿದ ಬಳಿಕ ಪರಿಸ್ಥಿತಿ ಶಾಂತವಾಯಿತು.
ಜನಸ್ಪಂದನ ಹಿತರಕ್ಷಣಾ ಸಮಿತಿಯ ಟಿ.ಮಾದೇಶ್, ಆರ್.ನಾಗರಾಜು, ಎಂ.ನಂಜಪ್ಪ, ಬಿ.ಎ.ಜ್ಯೋತಿ, ಜಿ.ಆರ್.ನಾಗರಾಜು, ಕೆ.ಆರ್.ಅಳಸಿಂಗರನ್ ಇತರರು ಇದ್ದರು.