ಜಿಲ್ಲೆ

ಭಾನುವಾರ ಕರ್ಯ್ೂನಿಂದ ಸಂಚಾರ ವ್ಯತ್ಯಯ, ಟೋಲ್‌ಗಳಲ್ಲಿ ವಾಹನ ದಟ್ಟಣೆ

Bengaluru Rural

ನೆಲಮಂಗಲ: ರಾಜ್ಯಾದ್ಯಂತ ಭಾನುವಾರ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶನಿವಾರ ಹೆದ್ದಾರಿಗಳಲ್ಲಿ ದಿಢೀರ್‌ನೇ ಹೆಚ್ಚಾದ ವಾಹನಗಳಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಮೇ 3ರಿಂದೀಚೆಗೆ ತುರ್ತು ಸೇವೆ ಹೊರತುಪಡಿಸಿ ಲಾಕ್‌ಡೌನ್ ಮುಂದುವರಿಸಿದ್ದ ರಾಜ್ಯ ಸರ್ಕಾರ ಬಹುತೇಕ ಸೇವೆಗಳಿಗೆ ನಿಯಮ ಸಡಿಲಿಕೆ ಮಾಡಿತ್ತು. ಉದ್ಯೋಗ ಇನ್ನಿತರ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಆಗಮಿಸಿದ್ದ ಸಾರ್ವಜನಿಕರು ಶನಿವಾರ ಮಧ್ಯಾಹ್ನದಿಂದಲೇ ಹೊರ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದು, ದೂರದ ಜಿಲ್ಲೆಗಳಿಂದ ಬೆಂಗಳೂರು ಕಡೆಗೆ ವಾಹನಗಳು ಆಗಮಿಸುತ್ತಿದ್ದರಿಂದ ಟೋಲ್‌ಗಳಲ್ಲಿ ವಾಹನ ದಟ್ಟಣೆಗೆ ಕಾರಣವಾಗಿತ್ತು.

ಪಟ್ಟಣದ ರಾ.ಹೆ.4 ಮಾರ್ಗದ ನವಯುಗ ಟೋಲ್, ತುಮಕೂರು ಮಾರ್ಗದ ಜಾಸ್‌ಟೋಲ್ ಸೇರಿ ತಾಲೂಕಿನ ಯಂಟಗಾನಹಳ್ಳಿ ಬಳಿ ಇರುವ ಲ್ಯಾಂಕೋದೇವಿಹಳ್ಳಿ ಟೋಲ್‌ಗೇಟ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದವು.

ವಾಹನಗಳ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಿಲ್ಲಾ ಗಡಿಗಳಲ್ಲಿ ಕಾವಲಿರುವ ಪೊಲೀಸರು ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಕೇಸ್ ದಾಖಲಿಸುವುದರಿಂದ ಸಂಜೆ 7ಗಂಟೆಯ ಒಳಗಾಗಿ ಊರುಗಳಿಗೆ ತಲುಪುವ ತವಕದಲ್ಲಿ ಸಾರ್ವಜನಿಕರು ಪ್ರಯಾಣ ಬೆಳೆಸಿದರು.