ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅತಿವೇಗ, ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ನೀರಿನ ಗುಂಡಿಗೆ ಬಿದ್ದಿದ್ದು ಚಾಲಕ ಮೃತಪಟ್ಟಿದ್ದಾನೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೋಗಲವಾರಪಲ್ಲಿ ಗ್ರಾಮದ ಎಸ್. ಆದರ್ಶ (21) ಮೃತ. ಕಾರಿನಲ್ಲಿದ್ದ ಚಿಂತಾಮಣಿ ತಾಲೂಕಿನ ತಮ್ಮೇಪಲ್ಲಿ ಗ್ರಾಮದ ಟಿ.ಎನ್. ಶರತ್ (21), ಹೊಸಕೋಟೆಯ ಭರತ್ ಮತ್ತು ರಿಯಾನ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.
ಮೂವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸೋಗಲವಾರಪಲ್ಲಿಯ ಆದರ್ಶ ಅವರ ಮನೆಗೆ ಊಟಕ್ಕೆ ಬಂದಿದ್ದರು. ತಡರಾತ್ರಿ ವಾಪಸ್ ಕಾರಿನಲ್ಲಿ ಬರುತ್ತಿದ್ದಾಗ ಬಿ.ಕೊತ್ತಕೋಟೆ-ಚಿಂತಾಮಣಿ ಮುಖ್ಯರಸ್ತೆ ಸಂತೆಗೇಟ್ ಬಳಿ ಅಪಘಾತ ಸಂಭವಿಸಿದೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.