ಚಿಂತಾಮಣಿ: ತಳಗವಾರ ಸಮೀಪ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರು ಸಮೀಪದ ಆನೇಕಲ್‌ನ ಶಿವಪ್ಪ (70) ಮೃತ. ಕೈವಾರದ ಬಳಿಯ ಲೋಕೇಶ್ ಅವರ ತೋಟದಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಶಿವಪ್ಪ ಅಲ್ಲಿಯೇ ವಾಸವಿದ್ದರು. ಗುರುವಾರ ಸಂಜೆ ಕಾರ್ಯನಿಮಿತ್ತ ತಳಗವಾರ ಗ್ರಾಮಕ್ಕೆ ಬಂದಿದ್ದು, ಕೈವಾರಕ್ಕೆ ರಾತ್ರಿ ವಾಪಸ್ ನಡೆದುಕೊಂಡು ಹೋಗುತ್ತಿದ್ದಾಗ ಚಿಂತಾಮಣಿ- ಬೆಂಗಳೂರು ರಸ್ತೆಯ ತಳಗವಾರ ಸಮೀಪದ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ರಸ್ತೆ ತಿರುವಿನಲ್ಲಿ ವಾಹನ ಡಿಕ್ಕಿ ಹೊಡೆದಿದೆ. ಕೈವಾರ ಹೊರಠಾಣೆ ಎಎಸ್‌ಐ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ, ಶವವನ್ನು ಮರಣೊತ್ತರ ಪರೀಕ್ಷೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್ ಸಹ ಸ್ಥಳ ಪರಿಶೀಲಿಸಿದರು. ಡಿಕ್ಕಿ ಹೊಡೆದ ವಾಹನದ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.