ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಪೇಪರ್ಸ್‌ ಒಯ್ಯುತ್ತಿದ್ದ ವಾಹನ ಅಪಘಾತ

ಬಂಕಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-48ರ ಟೋಲ್ ಹತ್ತಿರ ಭಾನುವಾರ ಸಂಭವಿಸಿದೆ.

ಅಪಘಾತದಲ್ಲಿ ಚಾಲಕ ಸೇರಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಆಗಮಿಸಿದ ಬಂಕಾಪುರ ಪೊಲೀಸರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ ಉತ್ತರ ಪತ್ರಿಕೆಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.

ರಾಯಚೂರ, ಯಾದಗಿರಿ, ಬೀದರ, ಬಾಗಲಕೋಟೆ, ಧಾರವಾಡ ಕೇಂದ್ರಗಳಿಂದ 2025ನೇ ಸಾಲಿನ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಬೆಂಗಳೂರು ಮಲ್ಲೇಶ್ವರಂ ಎಸ್ಸೆಸ್ಸೆಲ್ಸಿ ಬೋರ್ಡ್‌ಗೆ ತಲುಪಿಸಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ಬಂಕಾಪುರ ಟೋಲ್ ಹತ್ತಿರ ಓವರ್‌ಟೆಕ್ ಮಾಡಲು ಹೋಗಿ ಡಿವೈಡರ್‌ಗೆ ಬಡಿದು ವಾಹನ ಪಲ್ಟಿಯಾಗಿದೆ.

ಕೂಡಲೇ ಸ್ಥಳಕ್ಕೆ ಬಂದ ಪಿಎಸ್‌ಐ ನಿಂಗಪ್ಪ ಕರಕಣ್ಣವರ ಮತ್ತು ಸಿಬ್ಬಂದಿ ವಾಹನದಲ್ಲಿದ್ದ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಇಟ್ಟು ಹಾವೇರಿ ಡಿಡಿಪಿಐ ಕಚೇರಿಗೆ ಮಾಹಿತಿ ನೀಡಿದ್ದಾರೆ. ಹಾವೇರಿಯಿಂದ ಬಂದ ಶಿಕ್ಷಣ ಇಲಾಖೆ ಸಿಬ್ಬಂದಿ ಉತ್ತರ ಪತ್ರಿಕೆಗಳನ್ನು ಸುರಕ್ಷಿತಾಗಿ ಮತ್ತೊಂದು ವಾಹನದಲ್ಲಿ ಹಾಕಿ ಎಸ್ಸೆಸ್ಸೆಲ್ಸಿ ಬೋರ್ಡ್ ಬೆಂಗಳೂರಿಗೆ ಸೂಕ್ತ ಬೆಂಗಾವಲಿನೊಂದಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.