ಪಂಕಜ ಕೆ.ಎಂ.
ಬೆಂಗಳೂರು: ಬಿಸಿಲ ತಾಪ ದಿನೇದಿನೆ ಏರುತ್ತಿರುವುದರಿಂದ ತರಕಾರಿ ಗಿಡಗಳು ಒಣಗಿ ಇಳುವರಿ ಕುಸಿಯುತ್ತಿದ್ದರೆ, ಇನ್ನೊಂದೆಡೆ ದರ ಏರಿಕೆಯಾಗುತ್ತಿದೆ. ಇದರಿಂದಾಗಿ ನಷ್ಟ ಎದುರಿಸುತ್ತಿರುವ ವ್ಯಾಪಾರಿಗಳು ಕೆಲ ಕಾಲ ಮಾರಾಟವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಇಲ್ಲದೆ ರಾಜ್ಯಾದ್ಯಂತ ಬರಗಾಲ ಆವರಿಸಿದ್ದು ಬಹುತೇಕ ಜಿಲ್ಲೆಗಳಲ್ಲಿ ನೀರಿನ ಹಾಹಾಕಾರ ಇದೆ. ಕೊಳವೆಬಾವಿ ನೀರನ್ನು ನಂಬಿದ್ದ ರೈತರು ಅಂತರ್ಜಲ ಕುಸಿತದಿಂದ ಕಂಗಾಲಾಗಿದ್ದಾರೆ. ಕೆಲವೆಡೆ ನೀರಿದ್ದರೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಇದರ ಪರಿಣಾಮ ಕನಕಪುರ, ಹೊಸಕೋಟೆ, ಕೋಲಾರ, ದೊಡ್ಡಬಳ್ಳಾಪುರ, ತುಮಕೂರು, ನಂದಗುಡಿ, ಮಾಗಡಿ ಸೇರಿ ಸುತ್ತಮುತ್ತಲ ಪ್ರದೇಶಗಳಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ತರಕಾರಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಸೀಳು ಬಿಡುತ್ತಿರುವ ಆಲು- ತೆಂಗು: ಅತಿಯಾದ ತಾಪಮಾನದಿಂದಾಗಿ ತಿಂಗಳು ಕಾಲ ಇರುತ್ತಿದ್ದ ಆಲೂಗಡ್ಡೆ ಸೀಳು ಬಿಡುತ್ತಿವೆ. ಇಳುವರಿ ಕಡಿಮೆಯಾಗಿದ್ದು, ಇದರಿಂದ ಕಳೆದ 15 ದಿನಗಳಲ್ಲಿ ದರ ದುಪ್ಪಟ್ಟಾಗಿದೆ. 20 ರೂ.ನಿಂದ 40 ರೂ.ಗೆ ಏರಿಕೆಯಾಗಿದೆ. ತೆಂಗಿನಕಾಯಿಯದ್ದೂ ಇದೇ ಸ್ಥಿತಿ. ಹೀಗಾಗಿ ಕೆ.ಜಿ.ಗೆ 35- 40 ಇದ್ದ ತೆಂಗಿನಕಾಯಿ 60 ರೂ. ತಲುಪಿದೆ. ಒಂದು ಕಾಯಿಗೆ 20-25 ಹಾಗೂ 30-35 ರೂ. ಇದ್ದ ಬೆಲೆ ಕ್ರಮವಾಗಿ 30 ಹಾಗೂ 40 ರೂ.ಗೆ ಏರಿಕೆಯಾಗಿದ್ದು, ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತಿದೆ. 15 ರೂ.ಗೆ ಸಿಗುತ್ತಿದ್ದ ತೀರ ಸಣ್ಣ ಕಾಯಿ ಸರ 20 ರೂ. ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವ್ಯಾಪಾರ ಮಾಡುವುದಾದರೂ ಹೇಗೆ ಎಂದು ಕೆ.ಆರ್. ಮಾರುಕಟ್ಟೆ ವ್ಯಾಪಾರಿ ಕನಕರಾಜು ಎಂಬುವರು ಆತಂಕ ವ್ಯಕ್ತಪಡಿಸಿದರು.
ದುಬಾರಿಯಾದ ಸೊಪ್ಪು: ಸೊಪ್ಪುಗಳ ದರವೂ ಏರಿಕೆಯಾಗಿದೆ. ಮಳೆಯಿಲ್ಲದೆ ಬಿಸಿಲ ತಾಪದಿಂದ ಸೊಪ್ಪು ಸರಿಯಾಗಿ ಬೆಳೆಯುತ್ತಿಲ್ಲ. ನಾಟಿ ಕೊತ್ತಂಬರಿ ಸೊಪ್ಪು ಒಂದು ಕಂತೆಗೆ 30 ರೂ. ಇದ್ದರೆ, ಉಳಿದಂತೆ ದಂಟು, ಪಾಲಾಕ್, ಸಬ್ಬಕ್ಕಿ, ಮೆಂತ್ಯ 25-30 ರೂ. ಇದೆ.
ಮಾರುಕಟ್ಟೆಯಲ್ಲಿ ತರಕಾರಿ ದರ (ಕೆ.ಜಿ.ಗಳಲ್ಲಿ)
ಹಸಿಬಟಾಣಿ ₹200 ರೂ.
ಬೀನ್ಸ್ ₹120-150
ಹಸಿ ಮೆಣಸಿನಕಾಯಿ ₹120
ನುಗ್ಗೆಕಾಯಿ ₹120
ಚಪ್ಪರದವರೆಕಾಯಿ ₹80
ಕ್ಯಾಪ್ಸಿಕಂ ₹80
ಹೂಕೋಸ್ ಒಂದಕ್ಕೆ ₹60
ಬೀಟ್‌ರೂಟ್ ₹60
ಕ್ಯಾರೆಟ್ ₹60
ಬಜ್ಜಿ ಮೆಣಸಿಕಾಯಿ ₹60
ಬೂದಗುಂಬಳ ₹60
ಬೆಂಡೆಕಾಯಿ ₹50
ಹೀರೆಕಾಯಿ ₹50
ಆಲೂಗಡ್ಡೆ ₹40
ಬದನೆಕಾಯಿ ₹40
ಮೂಲಂಗಿ ₹40
ಟೊಮ್ಯಾಟೋ ₹30-40
ಸೌತೆಕಾಯಿ ₹50-60
ಕೋಟ್:
ನಾನು ಆರಂಭದಿಂದಲೂ ಹಸಿ ಮೆಣಸಿನಕಾಯಿ ಮತ್ತು ಶುಂಠಿ ವ್ಯಾಪಾರ ಮಾಡುತ್ತೇನೆ. ಶುಂಠಿ ದರ ಕೆ.ಜಿ.ಗೆ 200 ಇದೆ. ಅದನ್ನು ತಿಂಗಳ ಕಾಲ ಇಡಬಹುದು. ಆದರೆ ಒಂದುವಾರ ಕಾಲ ಇರುತ್ತಿದ್ದ ಹಸಿಮೆಣಸಿನಕಾಯಿ ಎರಡನೇ ದಿನಕ್ಕೆ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದು, 60 ರೂ.ಗೆ ತಂದು 40 ರೂ.ಗೆ ಮಾರಾಟ ಮಾಡುತ್ತಿದ್ದೇನೆ. -ರಂಗನಾಥ್, ವ್ಯಾಪಾರಿ
ಸೊಪ್ಪಿಗೆ ಬೇಡಿಕೆ ಇದೆ. ಆದರೆ ಪೂರೈಕೆ ಕಡಿಮೆ. ಹೇಗೋ ಹೆಣಗಾಡಿ ಒಂದಿಷ್ಟು ಬಂಡವಾಳ ಹಾಕಿ ತಂದರೂ ಬಿಸಿಲಿಗೆ ಬೇಗನೆ ಒಣಗಿ ಹೋಗುತ್ತದೆ. ಕಳೆದ ಒಂದು ತಿಂಗಳಿನಿಂದ ಇದೇ ರೀತಿ ನಷ್ಟ ಅನುಭವಿಸುವುದೇ ಆಗಿದೆ. ಆದರೆ ವ್ಯಾಪಾರ ಬಿಟ್ಟರೆ ಜೀವನ ಹೇಗೆ ಬಂದಷ್ಟು ಬರಲಿ ಎಂದು ಮಾರಾಟ ಮಾಡುತ್ತಿದ್ದೇನೆ. -ಲಕ್ಷ್ಮೀ, ವ್ಯಾಪಾರಿ
ಬಿಸಿಲಿಗೆ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚು, ಆದರೆ ಪೂರೈಕೆ ಕಡಿಮೆಯಾಗಿದ್ದು, ದರವೂ ಹೆಚ್ಚಿದೆ. ವಾರದ ಹಿಂದೆ 3 ಸಾವಿರ ರೂ. ಇದ್ದ 35 ಕೆ.ಜಿ. ಚೀಲ ಈಗ 5 ಸಾವಿರಕ್ಕೆ ಮಾರಾಟವಾಗುತ್ತಿದೆ. 10-12 ದಿನಗಳ ಕಾಲ ಇರುತ್ತಿದ್ದ ನಿಂಬೆ, ಈಗ 5-6 ದಿನ ಇರುವುದೇ ಹೆಚ್ಚು. -ವೇಲು, ನಿಂಬೆ ವ್ಯಾಪಾರಿ