ಜಿಲ್ಲೆ

ಮುಸ್ಲಿಮರಿಂದ ತರಕಾರಿ, ತುಮ್ಕೋಸ್ ಸಂಸ್ಥೆಯಿಂದ 1 ಲಕ್ಷ ಲಾಡು

ಸಿರಿಗೆರೆ: ಗ್ರಾಮದಲ್ಲಿ ಸೆ.20ರಿಂದ 24ರ ವರೆಗೆ ಆಯೋಜಿಸಿರುವ ತರಳಬಾಳು ಮಠದ ಗುರುಗಳು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹ ಕಾರ್ಯಕ್ಕೆ ಗೌರಮ್ಮನಹಳ್ಳಿ ಮುಸ್ಲಿಮರು ತರಕಾರಿ ನೀಡಲಿದ್ದಾರೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನ್ಯಾಯಪೀಠದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಚನ್ನಗಿರಿಯ ತುಮ್ಕೋಸ್ ಸಂಸ್ಥೆ ವತಿಯಿಂದ ಪ್ರತಿವರ್ಷದ ರೀತಿ ಈ ಬಾರಿಯೂ ಒಂದು ಲಕ್ಷ ಲಾಡು ಉಂಡೆಗಳನ್ನು ದಾಸೋಹಕ್ಕೆ ನೀಡಲಿದ್ದಾರೆ ಎಂದು ಹೇಳಿದರು.

ಮುಖ್ಯವಾಗಿ ಸಿರಿಗೆರೆ ಹಾಗೂ ಸುತ್ತಲಿನ ಹಳ್ಳಿಗಳ ನೂರಾರು ಭಕ್ತರು ಬೇಳೆ, ಅಕ್ಕಿ, ಬೆಲ್ಲ ಇತರ ವಸ್ತುಗಳನ್ನು ನೀಡುವ ಮೂಲಕ ಹಿರಿಯ ಗುರುಗಳ ಶ್ರದ್ಧಾಂಜಲಿ ಸಮಾರಂಭಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದರು.

ಐದು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಅನೇಕ ಗಣ್ಯರು, ಚಿಂತಕರು ಪಾಲ್ಗೊಳ್ಳಲಿದ್ದು, ಸೆ.24ರಂದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.