ತರಕಾರಿ ದುಬಾರಿ 
ಜಿಲ್ಲೆ

ಜೇಬು ತುಂಬ ದುಡ್ಡಿದ್ರೂ, ಚೀಲ ತುಂಬ ತರಕಾರಿ ಬರಲ್ಲ

ಶಿವರಾಜ.ಎಂ

ಗಗನಕ್ಕೇರಿದ ದರ

ತರಕಾರಿ ದುಬಾರಿ, ಜೇಬಿಗೆ ಕತ್ತರಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜೇಬು ತುಂಬ ದುಡ್ಡು ತೆಗೆದುಕೊಂಡು ಹೋದ್ರೂ ಚೀಲದ ತುಂಬ ತರಕಾರಿ ತರಲು ಸಾಧ್ಯವಿಲ್ವಲ್ಲಪ್ಪ. ತರಕಾರಿ ಈಗ ಏನಿದ್ರೂ ಶ್ರೀಮಂತರ ಸ್ವತ್ತಷ್ಟೇ, ಹುರುಳಿಕಾಯಿ ಖರೀದಿಸಬೇಕಂದ್ರೆ ಲಕ್ಷಾಧೀಶ್ವರನೇ ಹೋಗಬೇಕು…. ಇದು ತರಕಾರಿ ಮಾರುಕಟ್ಟೆಗಳಲ್ಲಿ ಕೇಳಿಬರುತ್ತಿರುವ ಗ್ರಾಹಕರ ಮಾತು.
ತೀವ್ರ ಮಳೆಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ, ಇದರ ನಡುವೆಯೂ ಅಲ್ಲಲ್ಲಿ ಬೆಳೆದಿರುವ ತರಕಾರಿ ಬೆಳೆಗಳು ಬಿಸಿಲ ಹೊಡೆತಕ್ಕೆ ಬಾಡುತ್ತಿರುವುದರಿಂದ ದಿಢೀರನೇ ತರಕಾರಿ ದರ ಗಗನಕ್ಕೇರಿದೆ.
10 ವರ್ಷಗಳಿಗೆ ಹೋಲಿಸಿದರೆ ಕೆಲವೊಂದು ತರಕಾರಿ ದರದಲ್ಲಿ ಏರಿಳಿತ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ದಾಖಲೆ ಎನ್ನುವಂತೆ ಎಲ್ಲ ಬಗೆಯ ತರಕಾರಿ ದರವೂ ಗಗನಮುಖಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ, ಕೆರೆ-ಕಟ್ಟೆಗಳು ಒಣಗಿ ಕೊಳವೆಬಾವಿಗಳಲ್ಲಿ ಅಂತರ್ಜಲ ಗಣನೀಯವಾಗಿ ಇಳಿಕೆಯಾಗಿದೆ.
ಕೊಳವೆಬಾವಿ ಆಶ್ರಿತ ರೈತರು ಅಳಿದುಳಿದ ನೀರಿನಲ್ಲಿ ತರಕಾರಿ ಬೆಳೆ ಉಳಿಸಿಕೊಳ್ಳಲು ಏದುಸಿರು ಬಿಡುತ್ತಿದ್ದಾರೆ. ಸಾಮಾನ್ಯವಾಗಿ ತರಕಾರಿ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಮುಂಜಾನೆ ವೇಳೆ ಎಷ್ಟೇ ನೀರು ಹಾಯಿಸಿದರೂ ಕೆಲ ಗಂಟೆಗಳಲ್ಲೇ ಒಣಗಿ ಹೋಗುತ್ತದೆ. ಇದರ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆ ಬರದ ಮೇಲೆ ಬರೆ ಎಳೆಯುತ್ತಿದೆ. ಇದೆಲ್ಲದರ ಪರಿಣಾಮವಾಗಿ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆ ಗಣನೀಯವಾಗಿ ತಗ್ಗಿದ್ದು, ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.
ವ್ಯಾಪಾರಿಗಳ ಹಿಂದೇಟು: ಚಿಲ್ಲರೆ ವ್ಯಾಪಾರಿಗಳು ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೇ ಮುಂದಾಗುತ್ತಿಲ್ಲ. ಇದರಿಂದ ಅಂಗಡಿಗಳಲ್ಲೂ ತರಕಾರಿ ಮಾರಾಟವಾಗದೆ ವ್ಯಾಪಾರಿಗಳೂ ನಷ್ಟ ಅನುಭವಿಸುವಂತಾಗಿದೆ. ನಷ್ಟ ಮಾಡಿಕೊಳ್ಳುವುದಕ್ಕಿಂತ ಕೆಲದಿನಗಳ ಮಟ್ಟಿಗೆ ತರಕಾರಿ ಮಾರಾಟ ನಿಲ್ಲಿಸುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿರುವ ತರಕಾರಿ ವ್ಯಾಪಾರಿಗಳು, ವಹಿವಾಟಿನಿಂದಲೇ ಹಿಂದೆ ಸರಿಯುತ್ತಿದ್ದಾರೆ. ಮುಂದಿನ ದಿನ ಉತ್ತಮ ಮಳೆಯಾದರೂ ತರಕಾರಿ ಮಾರುಕಟ್ಟೆಗೆ ಬರಲು 2 ತಿಂಗಳಾದರೂ ಬೇಕು. ಅಲ್ಲಿಯವರೆಗೆ ಬೇರೆ ಉದ್ಯೋಗ ಮಾಡುವುದೇ ಒಳಿತು ಎಂಬ ಚರ್ಚೆ ವ್ಯಾಪಾರಿ ವಲಯದಲ್ಲಿ ಕಂಡುಬರುತ್ತಿದೆ.

ಸೌತೆಕಾಯಿ ದರವೂ ದುಬಾರಿ ಬೇಸಿಗೆ ವೇಳೆ ಹೆಚ್ಚು ಬೇಡಿಕೆ ಕುದುರುವ ಸೌತೆಕಾಯಿ ದರ ಗಗನಮುಖಿಯಾಗಿದೆ. ಸಾಮಾನ್ಯವಾಗಿ ಸೌತೆಕಾಯಿ ಗ್ರಾಹಕರ ಕೈಗೆಟುವ ದರವೇ ಇರುತ್ತದೆ. ಆದರೆ ಈಬಾರಿ ಸಾಮಾನ್ಯ ದಿನಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ದೇಹ ತಂಪಾಗಿಡುವಲ್ಲಿ ಪ್ರಮುಖ ಎನಿಸಿರುವ ಸೌತೆಕಾಯಿ ಸೇವನೆಗೆ ಗ್ರಾಹಕರು ಹೆಚ್ಚು ಮುಗಿಬೀಳುತ್ತಾರೆ. ಆದರೆ ದರ ಗಗನಮುಖಿಯಾಗಿರುವುದು ಗ್ರಾಹಕರ ಜೇಬು ಸುಡುವಂತಾಗಿದೆ.

ಹುರುಳಿಕಾಯಿ ದಾಖಲೆ ಈ ಬಾರಿ ಬೇರೆ ತರಕಾರಿಗಳಿಗೆ ಹೋಲಿಸಿದರೆ ಹುರುಳಿಕಾಯಿ ಬೆಲೆ ಗಗನಕ್ಕೇರಿದ್ದು, 200 ರೂ.ನಿಂದ 250 ರೂಪಾಯಿವರೆಗೆ ದರ ಹೆಚ್ಚಿಸಿಕೊಂಡಿದೆ. ಅದರಲ್ಲೂ ಗುಣಮಟ್ಟದ ಹುರುಳಿಕಾಯಿ ಕಾಣುವುದು ಕಷ್ಟ ಎಂಬ ಪರಿಸ್ಥಿತಿ ಇದೆ.


ತರಕಾರಿಗಳ ದರ
ಈರುಳ್ಳಿ ಕೆಜಿಗೆ 30ರೂ., ಆಲೂಗಡ್ಡೆ 40 ರೂ, ಟೊಮ್ಯೊಟೊ 40, ಹೀರೇಕಾಯಿ 60, ಬಟಾಣಿ 200, ಹುರುಳಿಕಾಯಿ 200, ಹಾಗಲಕಾಯಿ 60, ಬದನೆಕಾಯಿ 60, ಕ್ಯಾರೆಟ್ 80, ಕ್ಯಾಪ್ಸಿಕಂ 60, ತೊಂಡೆಕಾಯಿ 40, ಬೀಟ್ರೋಟ್ 40, ನಾಕಲ್ 40, ಸೌತೆಕಾಯಿ 50, ಸೋರೆಕಾಯಿ 40, ಹೂಕೋಸು 80, ಬದನೆಕಾಯಿ 60, ಕಾಲಿ ಫ್ಲವರ್ 120, ಮೆಣಸಿನಕಾಯಿ ರೂ.100, ಮೂಲಂಗಿ 80 ರೂಪಾಯಿ ಇದೆ.

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆಗೆ ತರಕಾರಿಯೇ ಬರುತ್ತಿಲ್ಲ. ತರಕಾರಿ ಬಂದರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ದರ ದುಬಾರಿಯಾಗಿರುವುದರಿಂದ ಗ್ರಾಹಕರ ಸಂಖ್ಯೆಯೂ ಗಣನೀಯವಾಗಿ ತಗ್ಗಿದೆ. ತರಕಾರಿ ಬೇಗ ಕೆಡುವುದರಿಂದ ನಮಗೆ ಮತ್ತಷ್ಟು ನಷ್ಟವಾಗುತ್ತಿದೆ.
ಆಂಜನಪ್ಪ, ತರಕಾರಿ ವ್ಯಾಪಾರಿ, ವಿಜಯಪುರ