ಹುಬ್ಬಳ್ಳಿ: ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟಾಗಿದೆ. ಡೀಸೆಲ್ ದರ ಏರಿಕೆಯಾಗಿರುವುದರಿಂದ ತರಕಾರಿ ಸಾಗಾಟ ಮಾಡುವ ವಾಹನಗಳು ಹೆಚ್ಚಿನ ಬಾಡಿಗೆ ಆಕರಿಸುತ್ತಿವೆ. ತರಕಾರಿ ಬೆಲೆ ಏರಿಕೆಗೆ ಮೂಲ ಇದೇ ಕಾರಣವಾಗಿದೆ.
ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟರೆ ಹುಬ್ಬಳ್ಳಿಯೇ ತರಕಾರಿ ವ್ಯಾಪಾರಕ್ಕೆ ದೊಡ್ಡ ಮಾರುಕಟ್ಟೆ. ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಗೆ ಜಿಲ್ಲೆ ಮಾತ್ರವಲ್ಲದೆ, ಸುತ್ತಲ ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳಿಂದ ರೈತರು, ವ್ಯಾಪಾರಸ್ಥರು ತರಕಾರಿ ಮಾರಾಟಕ್ಕೆ ಬರುತ್ತಾರೆ. ಇನ್ನುಳಿದಂತೆ ಹುಬ್ಬಳ್ಳಿ ಸುತ್ತಲಿನ ಗಿರಿಯಾಲ, ಗಾಮನಗಟ್ಟಿ, ನವಲಗುಂದ, ನರಗುಂದ ಭಾಗದಿಂದಲೂ ಇಲ್ಲಿನ ಎಪಿಎಂಸಿಗೆ ನಿತ್ಯ ಮಾರಲು ಬರುತ್ತಾರೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಖರೀದಿ ಮಾಡುವ ತರಕಾರಿಯನ್ನು ದಲಾಲಿ ವ್ಯಾಪಾರಸ್ಥರು ತುಮಕೂರು, ಬೆಂಗ ಳೂರಿಗೂ ರಫ್ತು ಮಾಡುತ್ತಾರೆ. ಬೆಳ ಗಾವಿಯ ತರಕಾರಿಯು ಗೋವಾಕ್ಕೆ ಹೋಗುತ್ತದೆ. ಈ ತರನಾಗಿ ತರಕಾರಿ ವ್ಯಾಪಾರಕ್ಕೆ ದೊಡ್ಡ ಹೆಸರಾಗಿರುವ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇದೀಗ ಬೆಲೆಯೂ ದೊಡ್ಡ ಮಟ್ಟಕ್ಕೆ ಏರಿದೆ. ಇದಕ್ಕೆ ಡೀಸೆಲ್ ಬೆಲೆ ಏರಿಕೆಯಾಗಿರುವುದೇ ಕಾರಣವೆನ್ನುತ್ತಾರೆ ವ್ಯಾಪಾರಸ್ಥರು.
ಕಳೆದ ವಾರ ಕೇವಲ 10 ರೂಪಾಯಿಗೆ ಕೆಜಿಯಂತೆ ತೂಗುತ್ತಿದ್ದ ಟೊಮ್ಯಾಟೊ, ಶನಿವಾರದ ಸಂತೆಯಲ್ಲಿ 35 ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಕೊಂಚ ಇಳಿಕೆ ಕಂಡಿದ್ದ ಉಳ್ಳಾಗಡ್ಡಿ 50 ರಿಂದ 60 ರೂ.ಗೆ ಏರಿಕೆಯಾಗಿದೆ. ಬದನೆಕಾಯಿ, ಬೆಂಡೆಕಾಯಿ, ಚವಳಿಕಾಯಿ 100ರ ಗಡಿ ತಲುಪಿದೆ. ಬೀನ್ಸ್, ಹಸಿ ಬಟಾಣಿಕಾಳು ಪ್ರತಿ ಕೆಜಿಗೆ 120 ರೂ.ಯಂತೆ ಮಾರಾಟವಾಗುತ್ತಿದೆ. ಆಲೂಗಡ್ಡೆ ಮಧ್ಯ ಪ್ರದೇಶದಿಂದ ಹುಬ್ಬಳ್ಳಿಗೆ ಬರುತ್ತದೆ. ಕಳೆದ ವಾರ 25 ರೂ.ಯಂತೆ ಮಾರಾಟವಾಗುತ್ತಿದ್ದ ಆಲೂಗಡ್ಡೆ ಈ ವಾರದ ಸಂತೆಯಲ್ಲಿ 35ರಿಂದ 40 ರೂ.ಗೆ ಮಾರಾಟವಾಗಿದೆ. ದಿಢೀರನೆ ತರಕಾರಿ ಬೆಲೆ ಗಗನಮುಖಿಯಾಗಿರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಬಿಸಿ ತಟ್ಟಿದೆ.
ವಾಹನ ಬಾಡಿಗೆ ದರ ಏರಿಕೆ: ಅನ್ಯ ರಾಜ್ಯಗಳಿಂದ ಆಲೂಗಡ್ಡೆ, ಉಳ್ಳಾಗಡ್ಡಿ ಹಾಗೂ ಇನ್ನಿತರ ತರಕಾರಿ ಗೂಡ್ಸ್ ಲಾರಿಗಳಲ್ಲಿ ಹುಬ್ಬಳ್ಳಿಗೆ ಬರುತ್ತದೆ. ಆದರೆ, ಸ್ಥಳೀಯವಾಗಿ ಸಿಗುವ ತರಕಾರಿ ಸಾಗಾಟಕ್ಕೆ ಟಂಟಂನಂತಹ ವಾಹನಗಳನ್ನು ವ್ಯಾಪಾರಸ್ಥರು ಆಶ್ರಯಿಸುತ್ತಾರೆ. ‘20 ಕಿ.ಮೀ. ದೂರದಿಂದ ತರಕಾರಿ ತರಲು 800ರಿಂದ 1000 ರೂ. ಬಾಡಿಗೆ ನೀಡುತ್ತಿದ್ದೇವು. ಆದರೀಗ, 1200 ಬಾಡಿಗೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಬೆಂಗೇರಿ ಸಂತೆಯ ತರಕಾರಿ ವ್ಯಾಪಾರಿ ಸಲೀಂಸಾಬ್ ಮುಜಾವರ್.
ಬೇಸಿಗೆಯಲ್ಲಿ ತರಕಾರಿ ಬೆಲೆ ಜಾಸ್ತಿಯಾಗುತ್ತದೆ. ಆದರೆ, ಇನ್ನೂ ಬೇಸಿಗೆ ಆರಂಭವಾಗಿಲ್ಲ. ಇದು ಬೇಸಿಗೆಯಿಂದ ದರ ಹೆಚ್ಚಾಗಿದ್ದಲ್ಲ. ಡಿಸೇಲ್ ದರ ಏರಿಕೆಯ ಪರಿಣಾಮ. ರೈತರಿಂದ ಖರೀದಿಸಿದ ತರಕಾರಿ ತರಲು ಗೂಡ್ಸ್ ಗಾಡಿಗಳು ಡಿಸೇಲ್ ಬೆಲೆ ಏರಿಕೆ ಹೆಚ್ಚಾಗಿದೆ ಎಂದು ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ. ನಾವೂ ಅನಿವಾರ್ಯವಾಗಿ ಹೆಚ್ಚು ಬೆಲೆಗೆ ತರಕಾರಿ ಮಾರಾಟ ಮಾಡಬೇಕಿದೆ. ಇಲ್ಲದೆ ಹೋದರೆ ನಾವು ನಷ್ಟ ಅನುಭವಿಸಬೇಕಾಗುತ್ತದೆ. | ಬಸವರಾಜ ಗಾಳೆಮ್ಮನವರ, ತರಕಾರಿ ವ್ಯಾಪಾರಸ್ಥ ಹುಬ್ಬಳ್ಳಿ