ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಕಾರಿ ಹಾಗೂ ದಿನಸಿ ಸಾಮಗ್ರಿ ದರ ಅಂಗಡಿಗಳಲ್ಲಿ ವ್ಯತ್ಯಾಸವಿದ್ದು, ಲಾಕ್‌ಡೌನ್ ದಿನಗಳಿಂದ ಚಿಲ್ಲರೆ ವ್ಯಾಪಾರಸ್ಥರು ಅವಶ್ಯ ಸಾಮಗ್ರಿ ದರ ಮನಸೋ ಇಚ್ಛೆ ಏರಿಕೆ ಮಾಡಿದ್ದಾರೆ.
ಬಂದರ್‌ನಲ್ಲಿ ದಿನಸಿ ಸಾಮಗ್ರಿಗಳ ರಖಂ ದರದಲ್ಲಿ ಶೇ.15ರಷ್ಟು ಏರಿಕೆಯಾಗಿದೆ. ಆದರೆ ಚಿಲ್ಲರೆ ಅಂಗಡಿಗಳಲ್ಲಿ ಶೇ.25ರಷ್ಟು ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದಾರೆ. ತರಕಾರಿ ಕೂಡ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ರಖಂ ಆಗಿ ಕಡಿಮೆ ದರಕ್ಕೆ ಸಿಕ್ಕಿದರೂ ಚಿಲ್ಲರೆ ವ್ಯಾಪಾರಿಗಳು ಅದನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಜನ ಸಾಮಾನ್ಯರಿಗೆ ಹೊರೆಯಾಗಿದೆ. ಬೇಡಿಕೆಗೆ ಪೂರಕವಾಗಿ ತರಕಾರಿ, ಹಣ್ಣು ಪೂರೈಕೆಯಾಗುತ್ತಿದ್ದು, ಆದರೂ ಬಹುತೇಕ ಅಂಗಡಿಗಳಲ್ಲಿ ದರ ಹೆಚ್ಚಳವಾಗಿದೆ.
ದರದಲ್ಲಿ ವ್ಯಾಪಕ ಹೆಚ್ಚಳ
ಬಂದರ್‌ನಲ್ಲಿ 38 ರೂ. ಸಿಗುವ ಕುಚ್ಚಲು ಅಕ್ಕಿಯನ್ನು ಚಿಲ್ಲರೆ ವ್ಯಾಪಾರಿಗಳು 45ರಿಂದ 48 ರೂ., 30 ರೂ.ಗೆ ಸಿಗುವ ನೀರುಳ್ಳಿ ಚಿಲ್ಲರೆ ವ್ಯಾಪಾರಿಗಳು 40-45 ರೂ., 35 ರೂ. ದರದಲ್ಲಿ ಸಿಗುವ ಸಕ್ಕರೆ 40ರಿಂದ 45 ರೂ., 60 ರೂ.ಗೆ ಸಿಗುವ ಕಡ್ಲೆ 80 ರಿಂದ 90 ರೂ., 100 ರೂ.ಗೆ ಸಿಗುವ ಬೇಳೆ 125 ರೂ., 150 ರೂ. ದರದಲ್ಲಿ ಸಿಗುವ ಬೆಳ್ಳುಳ್ಳಿ 180 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಕೆಲವು ಸಾಮಗ್ರಿಗಳ ದರ ಇನ್ನೂ 10-15 ರೂ. ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದಾರೆ.
ತರಕಾರಿ, ಹಣ್ಣು ದರ ಹೆಚ್ಚಿಸಿ ಮಾರಾಟ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ 15 ರೂ.ಗೆ ಸಿಗುವ ಟೊಮ್ಯಾಟೊ 25 ರೂ., 50 ರೂ. ಸಿಗುವ ತೊಂಡೆ 80 ರೂ., 60 ರೂ.ಗೆ ಸಿಗುವ ಹೀರೆಕಾಯಿ 80 ರೂ., 60 ರೂ. ಸಿಗುವ ಕಾಯಿಮೆಣಸು 100 ರೂ., 10 ರೂ.ಗೆ ಸಿಗುವ ಸೌತೆ 25 ರೂ., 50 ರೂ. ಸಿಗುವ ಅಲಸಂಡೆ 70 ರೂ., 20 ರೂ. ಸಿಗುವ ಬೀಟ್‌ರೂಟ್ 40 ರೂ., 15ರೂ. ಕ್ಯಾಬೇಜ್ 25 ರೂ., 70 ರೂ. ಕ್ಯಾರೆಟ್ 100 ರೂ., ಕಿತ್ತಳೆ, ದ್ರಾಕ್ಷಿ, ಆ್ಯಪಲ್, ಕಲ್ಲಂಗಡಿ ಮೊದಲಾದ ಹಣ್ಣುಗಳ ದರ ಹೆಚ್ಚಿಸಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.
ಕಳೆದ 20 ದಿನಗಳಿಂದ ಬಡ, ಮಧ್ಯಮ ವರ್ಗದ ಜನ ಕೆಲಸವಿಲ್ಲದೆ ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಈ ಸಂದರ್ಭ ಅವಶ್ಯ ಸಾಮಗ್ರಿ ದರ ಹೆಚ್ಚಳ ಮಾಡಿ ಗ್ರಾಹಕರನ್ನು ಲೂಟಿ ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ದರ ಪಟ್ಟಿ ನಿಗದಿ ಮಾಡಿ ಎಲ್ಲ ಅಂಗಡಿಗಳಲ್ಲಿ ಏಕರೂಪ ದರ ಪಡೆಯುಂತೆ ಮಾಡಬೇಕು. ಈ ಬಗ್ಗೆ ತಂಡ ರಚಿಸಿ ನಿಗಾ ಇಡುವ ಮತ್ತು ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಜರಗಿಸಬೇಕು. ರಘುರಾಜ್ ಕದ್ರಿ ಸಾಮಾಜಿಕ ಕಾರ್ಯಕರ್ತ ದಿನಸಿ, ಹಣ್ಣು, ತರಕಾರಿ ದರ ದುಪ್ಪಟ್ಟು ಮಾಡಿ ಮಾರಾಟ ಮಾಡುವುದು ಸರಿಯಲ್ಲ. ವ್ಯಾಪಾರಿಗಳು ಲಾಕ್‌ಡೌನ್ ಅವಧಿಯನ್ನು ಲಾಭಕ್ಕಾಗಿ ಬಳಸಿಕೊಳ್ಳಬಾರದು. ಸಾರ್ವಜನಿಕರನ್ನು ಲೂಟಿ ಮಾಡುವುದು ಕಂಡು ಬಂದರೆ ಜಿಲ್ಲಾಡಳಿತಕ್ಕೆ ದೂರು ನೀಡಬಹುದು. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ. ದ.ಕ.
ತರಕಾರಿ ಪೂರೈಕೆ ಸರಾಗ, ದರ ಪಟ್ಟಿಯಿಂದ ಏರಿಕೆ ಇಲ್ಲ
ಉಡುಪಿ: ಜಿಲ್ಲೆಯಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಸರಾಗವಾಗಿ ಪೂರೈಕೆಯಾಗುತ್ತಿದ್ದು, ಹೊರರಾಜ್ಯಗಳಿಂದಲೂ ಆಯ್ದ ತರಕಾರಿಗಳು ಬರಲು ಆರಂಭಿಸಿವೆ. ಆಗ್ರಾ, ಇಂದೋರ್ ಮೊದಲಾದ ಕಡೆಗಳಿಂದ ಬಟಾಟೆ, ಮಹಾರಾಷ್ಟ್ರ ನಾಗಪುರದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ತರಕಾರಿ ಧಾರಣೆ ಸ್ಥಿರವಾಗಿದೆ. ಟೊಮೆಟೋ ಕೆ.ಜಿ.ಗೆ 20 ರೂ, ಬೀನ್ಸ್ 80, ಬಟಾಟೆ 36, ಕ್ಯಾರೆಟ್ 40, ಬೆಂಡೆ 50, ಈರುಳ್ಳಿ 24, ಸೌತೆ 20 ರಂತೆ ಮಾರಾಟವಾಗಿದೆ. ಮೂಸಂಬಿ 50, ಕಿತ್ತಾಳೆ 70, ದ್ರಾಕ್ಷಿ 80, ಚಿಕ್ಕು 60 ರೂ.ದರ ನಿಗದಿ ಮಾಡಲಾಗಿದೆ. ದರ ಪಟ್ಟಿ ಇರುವುದರಿಂದ ದರ ಏರಿಕೆ ಆಗುತ್ತಿಲ್ಲ.