ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ರೈತರು ಬೆಳೆದ ತರಕಾರಿ, ಹಣ್ಣು, ದವಸ-ಧಾನ್ಯಕ್ಕೆ ಸಹಾಯಧನ ನೀಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಜಿಲ್ಲೆಯ ಖಾನಾಪುರ ತಾಲೂಕಿನ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.
ತರಕಾರಿ ಬೆಳೆದ ರೈತರಿಗೆ ಸರ್ಕಾರದಿಂದ ಸಹಾಯಧನ ನೀಡಬೇಕು ಹಾಗೂ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಪದಾಧಿಕಾರಿಗಳು ಆಗ್ರಹಿಸಿದರು. ಅಶೋಕ ಯಮಕನಮರಡಿ, ಗುರು ಲಿಂಗಯ್ಯ ಪೂಜಾರ, ಗಂಗಪ್ಪ ಹಿರೇಕರ, ಮಹಾದೇವ ಸಾಗರೇಕರ, ವಾಸು ತಿಪ್ಪಣ್ಣವರ, ಮಂಜುನಾಥ ಹುಲಿಕಟ್ಟಿ, ಶಿವಾಜಿ ಅಂಬಡಗಟ್ಟಿ ಇತರರಿದ್ದರು.
ಕುರಿಗಾಯಿಗಳ ರಕ್ಷಣೆಗೆ ಮುಂದಾಗಿ: ಕೋವಿಡ್-19 ನಿಂದ ಕುರಿಗಾಹಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಕುರಿಗಾರರ ರಕ್ಷಣೆಗೆ ಬರಬೇಕು. ಕುರಿಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ತರ ಕರ್ನಾಟಕ ಕುರುಬರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ನೀಲಕಂಠ ಕುರುಬರ, ಸಂಜಯ ಉಪರಿ, ಬಾಗಣ್ಣ ನರೋಟೆ, ಕೃಷ್ಣಾ ಕುರುಬರ, ಗಜಾನನ ಕಾರಣೀಕರ, ಬಾಬು ಸಾಂಬರೇಕರ ಮತ್ತಿತರರು ಉಪಸ್ಥಿತರಿದ್ದರು.
ಪರವಾನಗಿ ನವೀಕರಣಕ್ಕೆ ಆಗ್ರಹ: ಬೆಳಗಾವಿ ನಗರದಲ್ಲಿ ಪರವಾನಗಿ ನವೀಕರಣವಿಲ್ಲದ 1,000ಕ್ಕೂ ಹೆಚ್ಚು ಆಟೋಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಪರವಾನಗಿ ನೋಂದಣಿ ನೀಡುತ್ತಿಲ್ಲ. ಆಟೋ ಹಳೆಯವಾದರೂ ಸುರಕ್ಷತೆ ಮತ್ತು ಕಂಡೀಷನ್ ಸ್ಥಿತಿಯಲ್ಲಿರುವ ಆಟೋಗಳಿಗೆ ಪರವಾನಗಿ ನವೀಕರಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಆಟೋ ರಿಕ್ಷಾ ಮಾಲೀಕರು ಮತ್ತು ಚಾಲಕರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸದಸ್ಯರಾದ ಬಸವರಾಜ ಬಡನಾಯಕ, ರಫೀಕ್ ಮನಿಯಾರ್ ಹಾಗೂ ಆಟೋ ಮಾಲೀಕರು ಮತ್ತು ಚಾಲಕರು ಉಪಸ್ಥಿತರಿದ್ದರು. ಬಳಿಕ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಶಾಸಕ ಅನಿಲ ಬೆನಕೆ, ಅಭಯ ಪಾಟೀಲಗೆ ಮನವಿ ಸಲ್ಲಿಸಿದರು.
ನೇಕಾರರಿಗೆ ನೆರವು ಒದಗಿಸಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ನೇಕಾರರಿಗೆ ಶೀಘ್ರ ಪರಿಹಾರ ವಿತರಿಸಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ವಿ.ಮೋಹನ, ಕಾಂಗ್ರೆಸ್ ನಗರ ಅಧ್ಯಕ್ಷ ರಾಜು ಶೇಟ್ ಮತ್ತಿತರರು ಇದ್ದರು.