ಉಡುಪಿ: ಕ್ರೈಸ್ತ ಬಾಂಧವರ ತೆನೆ ಹಬ್ಬ ಮೊಂತಿ ಫೆಸ್ತ್ ಪ್ರಯುಕ್ತ ಸ್ಥಳಿಯ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭಾನುವಾರ ಸಾವಯವ ತರಕಾರಿ ಸಂತೆ ಆಯೋಜಿಸಲಾಗಿತ್ತು.
ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು ಸಾವಯವ ಗೊಬ್ಬರದಿಂದ ಬೆಳೆದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂದೆ, ಬಸಳೆ, ಇತರ ತರಕಾರಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ತರಕಾರಿ ಸಂತೆಗೆ ಹಲವರು ಭೇಟಿ ನೀಡಿ, ಸಾವಯವ ತರಕಾರಿ ಖರೀದಿಸಿದರು.
ತೊಟ್ಟಂ ದೇವಾಲಯದ ಶ್ರೀ ಸಾಮಾನ್ಯರ ಆಯೋಗ, ಕಥೊಲಿಕ್ ಸಭಾ ಸಂಘಟನೆಯ ವಿಶಿಷ್ಟ ಪ್ರಯತ್ನ ಯಶಸ್ವಿಯಾಯಿತು. ಸ್ಥಳಿಯ ಸರ್ವಧರ್ಮ ಸಮನ್ವಯ ಸಮಿತಿ ಕೂಡ ಇದಕ್ಕೆ ಕೈಜೋಡಿಸಿತ್ತು. ಸ್ಥಳಿಯ ಕಲ್ಮಾಡಿ, ಕೆಮ್ಮಣ್ಣು, ಕಲ್ಯಾಣಪುರ ಭಾಗದ ಕೆಸ್ತ ಬಾಂಧವರು ತರಕಾರಿ ಸಂತೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಕಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫೆರ್ನಾಂಡಿಸ್, ಸರ್ವ ಧರ್ಮಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ರಾಮಪ್ಪ ಸಾಲಿಯಾನ್, ಶಬೀರ್ ಸಾಹೇಬ್, ಸೀರಾಝ್ ಮಲ್ಪೆ ಉಪಸ್ಥಿತರಿದ್ದರು. ಲವೀನಾ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತರಕಾರಿಯನ್ನು ಬೆಳೆಸಿದವರಿಗೆ ಮಧ್ಯವರ್ತಿಗಳ ಹಾವಳಿಯಿಂದಾಗಿ ಉತ್ತಮ ಬೆಲೆ ಲಭಿಸುತ್ತಿಲ್ಲ. ಈ ನಿಟ್ಟಿನಲ್ಲಿ ರೈತರಿಂದ ನೇರವಾಗಿ ಸಾವಯವ ಗೊಬ್ಬರದಿಂದ ತಯಾರಿಸಿದ ತರಕಾರಿಯನ್ನು ಪಡೆಯಲು ತರಕಾರಿ ಸಂತೆ ಆಯೋಜಿಸಲಾಗಿದೆ. ಪ್ರಕೃತಿ ಎಲ್ಲಾ ಧರ್ಮದವರಿಗೂ ಸಮಾನವಾಗಿ ತನ್ನ ಸೊಬಗನ್ನು ನೀಡುತ್ತದೆ. ಅದರಂತೆ ಈ ಹಬ್ಬದ ಆಚರಣೆಗಳು ಸರ್ವಧರ್ಮದ ಸಹಭಾಗಿತ್ವದೊಂದಿಗೆ ನಡೆದಾಗ ಸೌಹಾರ್ದಯುತ ಸಮಾಜದ ನಿಮಾರ್ಣ ಸಾಧ್ಯ. ಡೆನಿಸ್ ಡೆಸಾ, ತೊಟ್ಟಂ ಚರ್ಚಿನ ಧರ್ಮಗುರು