ಪುರುಷೋತ್ತಮ ಪೆರ್ಲ ಕಾಸರಗೋಡು
ವರ್ಷದ ಹಿಂದೆ ಶಾಲಾ ಮಧ್ಯಾಹ್ನದೂಟದ ಆಹಾರ ತ್ಯಾಜ್ಯ ಬಳಸಿ, ಬಯೋಕಾಂಪೋಸ್ಟ್ ಘಟಕ ನಿರ್ಮಿಸುವ ಮೂಲಕ ಸುದ್ದಿಯಾಗಿದ್ದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ, ಪ್ರಸಕ್ತ ಡಿಜಿಟಲ್ ತಂತ್ರಜ್ಞಾನದ ನೀರು ಪೂರೈಕೆಯೊಂದಿಗೆ ಇದೇ ಗೊಬ್ಬರ ಬಳಸಿ ತರಕಾರಿ ಕೃಷಿ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಡಿಜಿಟಲ್ ನೀರಾವರಿಯ ಚಳಿಗಾಲದ ತರಕಾರಿ ಕೃಷಿ ಯೋಜನೆಗೆ ಶಾಲಾ ನೇಚರ್ ಕ್ಲಬ್ ವೇದಿಕೆ ಸಿದ್ಧವಾಗಿದೆ. ಕೇರಳ ಸರ್ಕಾರದ ಅಂಗಳದಲ್ಲಿ ತರಕಾರಿ ಕೃಷಿ ಯೋಜನೆಯನ್ವಯ ಆಯಾ ಶಾಲೆಗಳಿಗೆ ಬೇಕಾದ ತರಕಾರಿ ವಸ್ತುಗಳನ್ನು ಶಾಲಾ ವಠಾರದಲ್ಲೇ ಬೆಳೆಸಿಕೊಳ್ಳುವಂತೆ ನೀಡಿರುವ ಆದೇಶವನ್ನು ಪಾಲಿಸುವಲ್ಲಿ ಶಾಲಾ ನೇಚರ್ ಕ್ಲಬ್ ಪ್ರಯತ್ನಿಸುತ್ತಿದೆ. ಈಗಾಗಲೇ ಬಂಜರು ಭೂಮಿಯಂತಿದ್ದ ಶಾಲಾ ವಠಾರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಖ್ಯಾತಿ ಶ್ರೀ ಸತ್ಯನಾರಾಯಣ ನೇಚರ್ ಕ್ಲಬ್ಬಿಗಿದೆ.
ಎರಡು ವರ್ಷದ ಹಿಂದೆ ಶಾಲೆಯಲ್ಲಿ ಮಧ್ಯಾಹ್ನದೂಟದ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಮಾರ್ಪಡಿಸಲು ತನ್ನದೇ ಚಿಂತನೆಯಲ್ಲಿ ಕಾಂಪೋಸ್ಟ್ ಗೊಬ್ಬರ ಘಟಕ ತಯಾರಿಸಿಕೊಂಡಿರುವ ಶಾಲಾ ನೇಚರ್ ಕ್ಲಬ್, ಇದೇ ಗೊಬ್ಬರವನ್ನು ಬಳಸಿಕೊಂಡು ಶಾಲಾ ಮಧ್ಯಾಹ್ನದೂಟಕ್ಕೆ ಬೇಕಾದ ತರಕಾರಿ ಬೆಳೆಸಲು ಮುಂದಾಗಿದೆ. ಇದಕ್ಕಾಗಿ ಸ್ವತಃ ಪರಿಸರಸ್ನೇಹಿ ಗ್ರೋಬ್ಯಾಗ್‌ಗಳನ್ನು ನಿರ್ಮಿಸಿ, ಇದಕ್ಕೆ ಆಧುನಿಕ ತಂತ್ರಜ್ಞಾನದ ಮೂಲಕ ಹನಿ ನೀರಾವರಿ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.
ನೇಚರ್ ಕ್ಲಬ್ ಸಂಚಾಲಕ, ಶಾಲಾ ಶಿಕ್ಷಕ ಉಮೇಶ್ ಕೆ.ಪೆರ್ಲ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಹಳೇ ಹೆಂಚುಗಳನ್ನು ಬಳಸಿ ಕುಂಡ ತಯಾರಿಸಲಾಗುತ್ತಿದೆ. ಹೆಂಚುಗಳನ್ನು ಮೇಲ್ಮುಖವಾಗಿರಿಸಿ ಅದನ್ನು ದಾರದಿಂದ ಬಿಗಿದು, ಅದರೊಳಗೆ ಮಣ್ಣು ತುಂಬಿ ಸಸಿ ನೆಡಲಾಗುತ್ತದೆ. ಕ್ಯಾಬೇಜ್, ಕಾಲಿಫ್ಲವರ್, ಬದನೆ, ಬೆಂಡೆ, ಟೊಮ್ಯಾಟೊ, ಮೆಣಸು ಸೇರಿದಂತೆ ನಾನಾ ತರಕಾರಿ ಬೆಳೆಸಲಾಗುತ್ತಿದೆ.
ಡಿಜಿಟಲ್ ನೀರಾವರಿ ವ್ಯವಸ್ಥೆ
ನೀರಿನ ಮಿತ ಬಳಕೆ ಹಾಗೂ ಸ್ವಯಂಚಾಲಿತವಾಗಿ ನೀರುಣಿಸುವ ನಿಟ್ಟಿನಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸಣ್ಣ ಸಲಕರಣೆಯಲ್ಲಿ ದಿನಕ್ಕೆ ಎಷ್ಟು ಬಾರಿ ಅಥವಾ ಎಷ್ಟು ದಿನಕ್ಕೊಮ್ಮೆ ನೀರುಣಿಸಬೇಕು ಎಂಬ ಬಗ್ಗೆ ಟೈಮರ್ ಸೆಟ್ ಮಾಡಿಕೊಂಡು ಸ್ವಯಂಚಾಲಿತವಾಗಿ ನೀರುಣಿಸುವ ವ್ಯವಸ್ಥೆ ಈ ಡಿಜಿಟಲ್ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
ಯಶಸ್ಸಿನ ಪಥದತ್ತ ಯೋಜನೆ
ಶಾಲೆಯ ಮುಖ್ಯದ್ವಾರದ ಎರಡೂ ಪಾರ್ಶ್ವದಲ್ಲಿ ಸುಂದರ ಹೂದೋಟದ ನಡುವೆ, ತರಕಾರಿ ತೋಟವನ್ನೂ ಸಜ್ಜುಗೊಳಿಸಲಾಗಿದೆ. ವರ್ಷದ ಹಿಂದೆ ಸಾಕಾರಗೊಂಡಿರುವ ಕಾಂಪೋಸ್ಟ್ ಗೊಬ್ಬರ ಘಟಕದಿಂದ ತರಕಾರಿ ಕೃಷಿ ಯೋಜನೆಗೆ ಬೇಕಾದ ಜೈವಿಕ ಗೊಬ್ಬರವೂ ಸುಲಭವಾಗಿ ಲಭ್ಯವಾಗಲಿದೆ. ನೇಚರ್ ಕ್ಲಬ್‌ನ ಚಟುವಟಿಕೆಗಳಿಗೆ ಬೆಂಗಾವಲಾಗಿರುವ ಶಿಕ್ಷಕ ವೃಂದದ ಜತೆಗೆ, ವಿದ್ಯಾರ್ಥಿ ಬಳಗದ ಸಹಕಾರವೂ ಲಭ್ಯವಾಗುತ್ತಿರುವುದರಿಂದ ಇಲ್ಲಿನ ಒಟ್ಟು ಕಾರ್ಯಕ್ರಮ ಯಶಸ್ಸಿನ ಪಥದತ್ತ ಸಾಗುತ್ತಿದೆ.
ಹೂದೋಟದಲ್ಲಿ ನಿರಂತರ ಕಳೆ ಬೆಳೆಯುವುದನ್ನು ತಪ್ಪಿಸಲು, ಇಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸುವ ಚಿಂತನೆ ಮಧ್ಯೆ ಇದರಲ್ಲಿ ಗ್ರೋಬ್ಯಾಗ್ ಮೂಲಕ ತರಕಾರಿ ಬೆಳೆಸುವ ಕನಸು ಹುಟ್ಟಿಕೊಂಡಿದೆ. ಇನ್ನು ನೀರಾವರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿ, ಸಹೋದ್ಯೋಗಿ ಶಿಕ್ಷಕರ ಜತೆ ಮಾತುಕತೆ ನಡೆಸಿದಾಗ ಹುಟ್ಟಿಕೊಂಡ ಯೋಜನೆ ಇಂದು ಸಾಕಾರಗೊಂಡಿದೆ. - ಉಮೇಶ್ ಕೆ.ಪೆರ್ಲ ಶಿಕ್ಷಕ, ನೇಚರ್ ಕ್ಲಬ್ ಸಂಚಾಲಕ https://www.vijayavani.net/economic-self-sufficiency-if-pepper-is-grown https://www.vijayavani.net/handover-of-loudspeaker-equipment-to-panja-school