ಜಿಲ್ಲೆ

ವೀರೇಂದ್ರ ಹೆಗ್ಗಡೆ ಕೊಡುಗೆ ವರ್ಣಿಸಲು ಅಸಾಧ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಮಾತುಗಳಲ್ಲಿ ವರ್ಣಿಸಲು ಅಸಾಧ್ಯ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜನತಾ ಶಿಕ್ಷಣ ಸಮಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಧರ್ಮಸ್ಥಳ ಧರ್ಮಾ-ಧಿಕಾರಿ, ಜೆಎಸ್​ಎಸ್​ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಗ್ಗಡೆ ಅವರು ಸಮಾಜದ ಸರ್ವ ಸಮುದಾಯದ ಜನರ ಉದ್ಧಾರಕ್ಕೆ ತಮ್ಮ ಜೀವನ ಮೀಸಲಿಟ್ಟಿದ್ದಾರೆ. ಸಮಾಜ ಸೇವೆಯೇ ದೈವ ಸೇವೆ ಎಂದುಕೊಂಡಿರುವ ಅವರು, ಧರ್ಮ ಶಿಕ್ಷಣ, ದಾನ-ಧರ್ಮವೊಂದೇ ಜನರ ಕಲ್ಯಾಣವಲ್ಲ ಎಂಬುದನ್ನು ಅರಿತು ನಾಡಿನ ಸುಭಿಕ್ಷೆಗೆ ಅಷ್ಟ ದಿಕ್ಕುಗಳಲ್ಲೂ ಪರಿವರ್ತನೆ ಬಯಸಿ ಆಧುನಿಕ ಆಡಳಿತ ಪದ್ಧತಿಗೆ ಹೆಗ್ಗುರುತಾದವರು ಎಂದರು.

1973ರಲ್ಲಿ ಜನತಾ ಶಿಕ್ಷಣ ಸಮಿತಿಯ ಅಧಿಕಾರ ವಹಿಕೊಂಡ ನಂತರ ಶೈಕ್ಷಣಿಕ ಕ್ರಾಂತಿಯೇ ಆರಂಭವಾಯಿತು. ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಆಶಾದೀಪವಾಗಿ ಉತ್ತರ ಭಾಗದ ಚಿತ್ರಣವೇ ಬದಲಾಯಿತು. ನೈತಿಕ ಶಿಕ್ಷಣವನ್ನು ಗುರಿಯಾಗಿಟ್ಟುಕೊಂಡು ಜೆಎಸ್​ಎಸ್​ ಹಾಗೂ ಮಂಜುನಾಥೇಶ್ವರ ಎಜ್ಯುಕೇಶನ್​ ಟ್ರಸ್ಟಗಳ ಮೂಲಕ ಕೆಜಿಯಿಂದ, ಪಿಜಿಯವೆರೆಗೆ, ವೈದ್ಯಕಿಯ ಕಾಲೇಜುಗಳ ಮೂಲಕ ಶಿಕ್ಷಣ ದಾಸೋಹ ನೀಡುತ್ತಿದ್ದಾರೆ ಎಂದರು.

ಜೆಎಸ್​ಎಸ್​ ಮತ್ತು ಎಸ್​ಡಿಎಂ ಅಡಿ ಸ್ಥಾಪಿಸಿದ 130ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಶಾಲಾ-ಕಾಲೇಜುಗಳು, ರುಡಸೆಡ್​, ಇಂಜಿನಿಯರಿಂಗ್​, ವೈದ್ಯಕಿಯ ಕಾಲೇಜುಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಂತಹ ಸಂಸ್ಥೆಗಳು ಧಾರವಾಡದಲ್ಲಿ ಸ್ಥಾಪನೆಯಾಗಿದ್ದು ನಮ್ಮೆಲ್ಲರಿಗೂ ಒಲಿದ ಭಾಗ್ಯವೇ ಸರಿ ಎಂದರು.

ಜೆಎಸ್​ಎಸ್​ನ 25 ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಾಧನೆಗೆ ಗೌರವ ಸೂಚಿಸಿದರು. ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಡಾ. ಸೂರಜ್​ ಜೈನ ವಂದಿಸಿದರು.