ಹುಬ್ಬಳ್ಳಿ: ಈ ಬಾರಿ ಭಾದ್ರಪದ ಮಾಸದ ಮೊದಲ ಮಂಗಳವಾರ ನವದೆಹಲಿಯಲ್ಲಿ ಆಚರಿಸಲಾಗುವ ರಾಷ್ಟ್ರ ಮಟ್ಟದ ಶ್ರೀ ವೀರಭದ್ರ ದೇವರ ಜಯಂತಿ ಮಹೋತ್ಸವ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆ ತರಲು ಬದ್ಧತೆಯಿಂದ ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗಾವಿ ಮತ್ತು ಹುಕ್ಕೇರಿಯ ಶ್ರೀಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಭಾಗೋಜಿಕೊಪ್ಪ ಹಿರೇಮಠದ ಶ್ರೀಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಮೂಲಕ ಬೆಂಗಳೂರಿನ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದಿಪ ಕಂಕಣವಾಡಿ ಅವರು ಸಲ್ಲಿಸಿರುವ ಅಧಿಕೃತ ಆಹ್ವಾನ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಧಾನಿ ಅವರು ಶ್ರೀವಿರಭದ್ರದೇವರ ಜಯಂತಿ ಮಹೋತ್ಸವ ಉದ್ಘಾಟನೆಗೆ ಆಗಮಿಸುವಲ್ಲಿ ತಾವು ಶಕ್ತಿ ಮೀರಿ ಪ್ರಯತ್ನ ಮಾಡುವುದಾಗಿ ಹೇಳಿದರು.
ಚೈತನ್ಯ ಶಕ್ತಿ: ಶ್ರೀವಿರಭದ್ರದೇವರ ಅವತಾರ ಕುರಿತು ಸಚಿವರಿಗೆ ವಿವರಣೆ ನೀಡಿದ ಹುಕ್ಕೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿವಸಂಸತಿಯ ಮೂಲಪುರುಷರಾಗಿರುವ ಶ್ರೀ ವೀರಭದ್ರ ದೇವರು ರಂಭಾಪುರಿ ಪೀಠದ ಗೋತ್ರ ಪುರುಷರಾಗಿದ್ದಾರೆ. ಜನವಿರೋಧಿ ನಕಾರಾತ್ಮಕ ಅಮಂಗಲ ಶಕ್ತಿಗಳ ನಿವಾರಣೆಗೆ ಶ್ರಮಿಸಿದ್ದಾರೆ.
ಎಲ್ಲೆಡೆ ಸಕಾರಾತ್ಮಕ ಕ್ರಿಯಾಶೀಲ ಸತ್ಯಧರ್ಮವನ್ನು ಉಳಿಸಿ -ಬೆಳೆಸಿದ ಶಿಷ್ಟ ರಕ್ಷಕರಾಗಿದ್ದಾರೆ. ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ಶ್ರೀವಿರಭದ್ರ ದೇವರು.
ಈ ದಿಸೆಯಲ್ಲಿ ಮಹೋತ್ಸವದ ಉದ್ಘಾಟನೆಗೆ ಪ್ರಧಾನಿ ಅವರು ಆಗಮಿಸುವಲ್ಲಿ ವಿಶೇಷ ಪ್ರಯತ್ನ ಮಾಡುವಂತೆ ಸಚಿವರಲ್ಲಿ ಆಶಯ ವ್ಯಕ್ತಪಡಿಸಿದರು.
ಉಭಯ ಶ್ರೀಗಳು ಸಚಿವ ಜೋಶಿ ಅವರನ್ನು ಗೌರವಿಸಿ ಆಶೀರ್ವದಿಸಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮುಖಂಡರಾದ ಪಿ.ಎಂ. ಚಿಕ್ಕಮಠ, ಬಿ.ಸಿ. ಪಾಟೀಲ, ಚೆನ್ನಯ್ಯ ಚೌಕಿಮಠ, ಎಸ್.ಎ. ಹಳೇಮನಿ, ಬಿ.ಸಿ. ಹಿರೇಮಠ, ವಿ.ಎಸ್. ಸಾಲಿಮಠ, ಅಜ್ಜಯ್ಯ ಹಿರೇಮಠ ಇತರರು ಇದ್ದರು.