ಜಿಲ್ಲೆ

ವೀರಶೈವರು ವಿಶ್ವ ವ್ಯಾಪಿಗಳು; ಕಾಶಿ ಜಗದ್ಗುರುಗಳ ವ್ಯಾಖ್ಯಾನ, ಶ್ರೀಸಿದ್ಧಾಂತ ಶಿಖಾಮಣಿ ಪಂಜಾಬಿ ಗ್ರಂಥ ಲೋಕಾರ್ಪಣೆ

ಕುರುಕ್ಷೇತ್ರ (ಹರಿಯಾಣ): ವೀರಶೈವರು ಒಂದು ಪ್ರದೇಶಕ್ಕೆ ಒಂದು ಭಾಷೆಗೆ ಸೀಮಿತವಾಗಿರದೇ ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಅನೇಕ ಪರರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿರುವುದರಿಂದ ವೀರಶೈವರು ವಿಶ್ವವ್ಯಾಪ್ತಿಗಳು ಎಂದು ಶ್ರೀಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಪಂಜಾಬಿ ಅನುವಾದಿತ ಕೃತಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸನಾತನ ಹಿಂದೂ ವೀರಶೈವ ಲಿಂಗಾಯತರು ಒಂದು ಭಾಷೆ, ಪ್ರಾಂತಕ್ಕೆ ಸೀಮಿತರಾಗಿಲ್ಲ. ದಕ್ಷಿಣ ಭಾರತದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿರುವ ವೀರಶೈವರು, ಉತ್ತರ ಭಾರತದ ದಿಲ್ಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು ಕಾಶ್ಮೀರ ಮತ್ತು ಓರಿಸ್ಸಾ ಪ್ರಾಂತಗಳಲ್ಲಿಯೂ ಸಹ ಅನಾದಿ ಕಾಲದಿಂದ ವಾಸವಾಗಿದ್ದಾರೆ. ಭಾಷೆ ಅಥವಾ ವೇಷಭೂಷಣದಿಂದ ವೀರಶೈವರನ್ನು ಗುರುತಿಸುವುದು ಅಸಾಧ್ಯ. ಆದ್ದರಿಂದ ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಧರಿಸಿ, ಪಂಚಾಕ್ಷರಿ ಮಹಾಮಂತ್ರವನ್ನು ಜಪಿಸುವವರೆಲ್ಲರೂ ವೀರಶೈವರು. ಇದಕ್ಕೆ ಪೂರಕವಾಗಿ ವೀರಶೈವ ದಾರ್ಶನಿಕ ಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳ ಜೊತೆಗೆ ವಿದೇಶಿ ಭಾಷೆಗಲಿಗೂ ಅನುವಾದಗೊಂಡಿದೆ. ಡಾ. ಶಾಲೂ ರಾಮನಿವಾಸ ಜಂಗಮ ಅವರು ಪಂಜಾಬಿ ಭಾಷೆಗೆ ಅನುವಾದಿಸಿರುವ ಕಾರ್ಯ ಈ ಪ್ರಾಂತದ ಜನರಿಗೆ ಬಹುದೊಡ್ಡ ಉಪಕಾರವಾಗಿದೆ ಎಂದು ಗದ್ಗುರುಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ಪಂಜಾಬಿ ಅನುವಾದಿತ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಹರಿಯಾಣದ ಗ್ರಾಮೀಣ ವಿಕಾಸ ಮಂತ್ರಿ ಕೃಷ್ಣಲಾಲ್ ಪವಾರ ಲೋಕಾರ್ಪಣೆಗೊಳಿಸಿದರು.

ಸಮಾರಂಭದಲ್ಲಿ ಬಾರ್ಶಿ ದಹಿವಡಕರ ಮಠದ ಶ್ರೀ ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ನವನಗರದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ವಿವಿಧ ಪ್ರಾಂತಗಳ ಸನಾತನ ಹಿಂದೂ ವೀರಶೈವ ಲಿಂಗಾಯತ ಮುಖಂಡರು ಪಾಲ್ಗೊಂಡಿದ್ದರು.

"ಪಾರಂಪರಿಕ ವೇಷಭೂಷಣಗಳನ್ನು ಧರಿಸಿ ಶಿವಕಥೆಯನ್ನು ಹೇಳುವ ಸನಾತನ ಹಿಂದೂ ವೀರಶೈವ ಶಿವಕಥಾಕಾರರು ಕಡಿಮೆಯಾಗುತ್ತಿದ್ದಾರೆ. ಈ ಪ್ರದೇಶದ ವೀರಶೈವ ಲಿಂಗಾಯತ ಜಂಗಮರಿಗೆ ಬೇಕಾಗುವ ಅನುಕೂಲತೆಗಳನ್ನು ಮಾಡಿಕೊಡಲು ಸರ್ಕಾರ ಬದ್ಧವಾಗಿದೆ.” - ಕೃಷ್ಣಲಾಲ್ ಪವಾರ, ಹರಿಯಾಣ ಸಚಿವ