ಹುಬ್ಬಳ್ಳಿ: ಅಖಂಡ ವೀರಶೈವ ಲಿಂಗಾಯತ ಸಮುದಾಯ ದೊಡ್ಡ ಶಕ್ತಿ ಕೇಂದ್ರವಾಗಿದೆ. ಸರಿಯಾದ ಮಾರ್ಗದರ್ಶನವಿಲ್ಲದೇ ಜಾತಿಗಳ ವಿಂಗಡಣೆಯಿಂದ ಸಮುದಾಯ ಸಂಕೀರ್ಣವಾಗುತ್ತಿದೆ. ಕೆಲವು ಶಕ್ತಿಗಳು ಮೂಗಿಗೆ ತುಪ್ಪ ಹಚ್ಚಿ ಸಮುದಾಯವನ್ನು ವಿಂಗಡಿಸುತ್ತಿವೆ. ಇದರ ಬಗ್ಗೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಎಚ್ಚರವಿದೆ. ಎಲ್ಲರೂ ಭವಿಷ್ಯದ ಅರಿವಿನಿಂದ ಮುನ್ನಡೆಯಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸುಳ್ಳ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಪುರಾಣ ಮಂಗಲೋತ್ಸವ, ವೀರಶೈವ ಜಂಗಮ ಸಂಸ್ಥೆ, ಡಾ. ಮಾಲತಿ ಹಿರೇಮಠ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ನಿಂದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ 32ನೇ ವರ್ಷದ ಸ್ಮರಣಾರ್ಥ ಸೋಮವಾರ ಏರ್ಪಡಿಸಿದ್ದ ಪ್ರಥಮ ದತ್ತಿ ಉಪನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಡಿದ ಮಾತಿನಂತೆ ನಡೆಯುವುದೇ ಧರ್ಮ. ಧರ್ಮವನ್ನು ನಾಶ ಮಾಡುತ್ತೇವೆ ಎಂದರೆ, ಅದು ಸತ್ಯದ ನಾಶವೆಂದಂತೆ. ಮನುಷ್ಯನ ಸುಖ, ಸಮೃದ್ಧಿಗೆ ಧರ್ಮ ಬೇಕು. ಜಗತ್ತಿಗೆ ಧರ್ಮವೇ ಬೆಳಕು. ಧರ್ಮ ನಾಶವಾಗಲಿದೆ ಎಂದು ಹೇಳಿದವರೇ ನಾಶವಾದ ಉದಾಹರಣೆಗಳಿವೆ. ಮಣ್ಣು ಎಸೆದವರ ಕಣ್ಣಿಗೆ ಬೀಳುತ್ತದೆ. ಧರ್ಮದ ಕುರಿತು ಯಾರೂ ಅಸಂಬದ್ಧ ಹೇಳಿಕೆ ನೀಡಬಾರದು ಎಂದು ಕಿವಿ ಮಾತು ಹೇಳಿದರು.
ಕೆಲವು ಸಂಶೋಧಕರಿಗೆ, ಸಾಹಿತ್ಯ ರಚನಾಕಾರರಿಗೆ 12ನೇ ಶತಮಾನದ ನಂತರದ್ದು ಮಾತ್ರ ಕಾಣುತ್ತದೆ. 12ನೇ ಶತಮಾನದ ಪೂರ್ವದ ಪರಂಪರೆ, ಧಾರ್ವಿುಕ ಕ್ರಾಂತಿ, ಸಾಮಾಜಿಕ ಬದಲಾವಣೆ ಕಾಣುತ್ತಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಪೂರ್ವದ ದಾಖಲೆಗಳನ್ನು ಮರೆಮಾಚಿ, 12ನೇ ಶತಮಾನದ ಘಟನಾವಳಿಗಳನ್ನು ಮಾತ್ರ ಕೃತಿಗಳಲ್ಲಿ ಮುನ್ನಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರಿಗೂ ದೀಕ್ಷಾ ಗುರು ಇದ್ದರು. ಗುರು ಪರಂಪರೆ ಕೃಪಾಶೀರ್ವಾದದಿಂದ ಅವರು ಬೆಳೆದು ಬಂದಿದ್ದಾರೆ. ಕೈಯಿಂದ ಕಣ್ಣು ಮುಚ್ಚಿದ ಮಾತ್ರಕ್ಕೆ ಸೂರ್ಯ ಚಂದ್ರರು ಹೇಗೆ ಮರೆಯಾಗುವುದಿಲ್ಲವೋ ಹಾಗೆ ನಿಜಾಂಶಗಳು ಎಲ್ಲರಿಗೂ ತಿಳಿದು ಬರುತ್ತವೆ. ಪಕ್ಷಪಾತದಿಂದ ಕೂಡಿದ ಹೇಳಿಕೆ, ಸಾಹಿತ್ಯ ರಚನೆಗಳಿಂದ ಐತಿಹಾಸಿಕ ಅಪರಾಧವಾಗುತ್ತದೆ ವಿನಹ ಏನನ್ನೂ ಸಾಧಿಸಲಾಗುವುದಿಲ್ಲ ಎಂದರು.
ಅಕ್ಟೋಬರ್ 15ರಿಂದ 24ರವರೆಗೆ ರಾಯಚೂರ ಜಿಲ್ಲೆ ಲಿಂಗಸುಗೂರಿನಲ್ಲಿ ಜರುಗುವ ಶ್ರೀ ರಂಭಾಪುರಿ ಜಗದ್ಗುರುಗಳ 32ನೇ ವರ್ಷದ ದಸರಾ ಧರ್ಮ ಸಮಾರಂಭದಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕೆಂದು ಜಗದ್ಗುರುಗಳು ತಿಳಿಸಿದರು.
ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದರು.
ಹೂಲಿ ಸಾಂಬಯ್ಯನಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಶಾಸಕ ಎನ್.ಎಚ್. ಕೊನರಡ್ಡಿ ಮಾತನಾಡಿದರು. ಸಂಶೋಧಕರಾದ ಡಾ.ಎ.ಸಿ. ವಾಲಿ ಗುರೂಜಿ ವಿಶೇಷ ಉಪನ್ಯಾಸ ನೀಡಿದರು. ವೇದಮೂರ್ತಿ ಸಿದ್ದರಾಮಯ್ಯ ಹಿರೇಮಠ ಪುರಾಣ ಮಂಗಲಗೊಳಿಸಿದರು. ಜಂಗಮ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಯಾಹಟ್ಟಿಯ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ವೀರಶೈವ ಜಂಗಮ ಸಂಸ್ಥೆ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ, ಗುರು ರಾಯನಗೌಡ್ರು, ಯಶವಂತ ಕುಲಕರ್ಣಿ, ಪ್ರೊ.ಕೆ.ಎಸ್. ಕೌಜಲಗಿ ಇತರರು ಇದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಎಂ.ಎಸ್. ಶಿವಳ್ಳಿಮಠ ನಿರೂಪಿಸಿದರು. ಗುರುಸಿದ್ದಯ್ಯ ಸವದಿಮಠ ಪ್ರಾರ್ಥಿಸಿದರು. ಸಣಕಲ್ಲಪ್ಪ ಒಂಟಿ ವಂದಿಸಿದರು.