ಶಿಕಾರಿಪುರ ದೊಡ್ಡಪೇಟೆಯ ಶ್ರೀ ಬಸವಣ್ಣ ದೇವಸ್ಥಾನದ ಪಾಕಶಾಲೆ ಮತ್ತು ವಸತಿಗೃಹದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಸುರಗಿಹಳ್ಳಿ ಶಾಂತಮ್ಮ ಚಾಲನೆ ನೀಡಿದರು. ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಸಕ್ರಿ ಸಂತೋಷ್, ಶಿವಾನಂದ ಇತರರಿದ್ದರು. 
ಜಿಲ್ಲೆ

ವೀರಶೈವ ಸಮಾಜ ಸಾಮಾಜಿಕ ಕಳಕಳಿಯ ಸಾಕ್ಷಿರೂಪ: ಬಿವೈಆರ್

ಶಿಕಾರಿಪುರ: ವೀರಶೈವ ಸಮಾಜ ಎಂದೆಂದಿಗೂ ಸಮಾಜಮುಖಿ ಮತ್ತು ಸಾಮಾಜಿಕ ಕಳಕಳಿಯ ಸಾಕ್ಷಿರೂಪವಾದ ಸಮಾಜ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ದೊಡ್ಡಪೇಟೆಯ ಶ್ರೀ ಬಸವಣ್ಣ ದೇವಸ್ಥಾನದ ಪಾಕಶಾಲೆ ಮತ್ತು ವಸತಿಗೃಹದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಶೈವ ಸಮಾಜ ಶರಣರ ಚಿಂತನೆಗಳನ್ನೇ ಬದುಕಿನಲ್ಲಿ ಹಾಸು ಹೊಕ್ಕಾಗಿಸಿಕೊಂಡಿರುವ ಸಮಾಜ. ಎಲ್ಲ ಸಮಾಜಗಳ ಜತೆಗೆ ಸದಾ ಅವಿನಾಭಾವ ಹೊಂದಿರವಂತಹ ಸಹೃದಯಿ ಸಮಾಜ. ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿ, ಸಮಾಜಮುಖಿ ಕಾರ್ಯಕ್ಕೆ ಬಲ ತುಂಬಿದ್ದೇ ನಮ್ಮ ವೀರಶೈವ ಸಮಾಜ. ನನ್ನ ಮೇಲೆ ಸಮಾಜದ ಋಣವಿದೆ. ವ್ಯಕ್ತಿಗಿಂತ ಸಮುದಾಯ ದೊಡ್ಡದು. ವೀರಶೈವ ಸಮಾಜ ಸಂಘಟನೆ ಆಗಬೇಕು ಎಂದು ದಶಕಗಳ ಹಿಂದೆಯೇ ಹಾನಗಲ್ ಕುಮಾರ ಶಿವಯೋಗಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ ಸಮುದಾಯದ ಸಂಘಟನೆಗೆ ಬಲ ತುಂಬಿದರು ಎಂದರು.
ಶತಮಾನಗಳದಲೂ ವೀರಶೈವ ಮಠಗಳು ಸಾಮಾಜಿಕ ಕಾರ್ಯ ಮಾಡುತ್ತಿವೆ. ಅಕ್ಷರ, ಅರಿವು, ಅನ್ನದಾಸೋಹದ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ನಾಡಿಗೆ ಹಂಚುತ್ತಿವೆ. ಕಾಯಕ ದಾಸೋಹ ಸಹಬಾಳ್ವೆಯ ತಳಹದಿಯ ಮೇಲೆ ಇವತ್ತಿಗೂ ವೀರಶೈವ ಸಮಾಜ ಸಾಗುತ್ತಿದೆ. ಮಠ-ಮಂದಿರಗಳು ನಮ್ಮ ಶ್ರದ್ಧಾ ಕೇಂದ್ರಗಳು. ಅವುಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರದು ಎಂದು ಹೇಳಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯ ಅಭಿವೃದ್ಧಿಯು ಸುಮಾರು 69 ಕೋಟಿ ರೂ. ವೆಚ್ಚದಲ್ಲಿ ಆಗಿದೆ. 65 ಅಡಿ ಎತ್ತರದ ಅಕ್ಕಮಹಾದೇವಿ ಪ್ರತಿಮೆ ನಯನ ಮನೋಹರವಾಗಿದೆ. ರಾಘಣ್ಷ ಅತಿ ಹೆಚ್ಚಿನ ಅನುದಾನವನ್ನು ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಕೂಡಲ ಸಂಗಮದಂತೆ ಉಡುಗಣಿ ಕೂಡ ಅತ್ಯಂತ ಶ್ರೇಷ್ಠ ಪ್ರವಾಸಿಕೇಂದ್ರ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ದೊಡ್ಡಪೇಟೆ ಬಸವಣ್ಣ ವೀರಶೈವ ಸಮಾಜದ ಕಾರ್ಯದರ್ಶಿ ಸಕ್ರಿ ಸಂತೋಷ್ ಮಾತನಾಡಿ, ತಾಲೂಕಿನ ಸಾಕಷ್ಟು ಕ್ಷೇತ್ರಗಳಿಗೆ, ಮಠ ಮಂದಿರಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅನುದಾನ ನೀಡಿ ಅವುಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ದೇವಸ್ಥಾನದ ಪಾಕಶಾಲೆ ಮತ್ತು ವಸತಿಗೃಹಗಳಿಗೆ 75 ಲಕ್ಷ ರೂ. ಅನುದಾನ ನೀಡಿದ್ದಾರೆ. ಅವರ ಧಾರ್ಮಿಕ ಚಿಂತನೆಯೇ ಅವರ ಕುಟುಂಬವನ್ನು ಸದಾ ಕಾಯುತ್ತದೆ. ಶಾಸಕ ಬಿ.ವೈ.ವಿಜಯೇಂದ್ರ ಅವರ ಸಹಕಾರವೂ ಅತಿ ಮುಖ್ಯ ಎಂದರು.
ದೊಡ್ಡಪೇಟೆ ಬಸವಣ್ಣ ವೀರಶೈವ ಸಮಾಜದ ಅಧ್ಯಕ್ಷ ಶಿವಾನಂದ, ಮಾಜಿ ಅಧ್ಯಕ್ಷ ಸಕ್ರಿ ವಿಜಯಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪ್ರಮುಖರಾದ ಸುರಗಿಹಳ್ಳಿ ಶಾಂತಮ್ಮ, ರೇಣುಕ ಸ್ವಾಮಿ, ಶೈಲಾ ಮಡ್ಡಿ, ಸಿದ್ದು ಹರಿಹರ, ಸಾಲೂರು ಕುಮಾರ್, ಅಂಗಡಿ ಜಗದೀಶ್, ಸುಭಾಶ್ಚಂದ್ರ ಸ್ಥಾನಿಕ್, ಪ್ರವೀಣ್ ಇತರರಿದ್ದರು.