ಜಿಲ್ಲೆ

ಬಹುಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ವೀರಶೈವ ಮಠ-ಪೀಠಗಳು

ಪ್ರಶಾಂತ ರಿಪ್ಪನ್​ಪೇಟೆ

ನಿರಂಜನ ದೇವರಮನೆ, ಚಿತ್ರದುರ್ಗ: ಆಚಾರ-ವಿಚಾರ ಎರಡನ್ನೂ ಮೇಳೈಸಿಕೊಂಡಿರುವ ಭಾರತೀಯ ವಿಚಾರಧಾರೆ ವಿಶ್ವವ್ಯಾಪಿ ಹರಡಿದೆ. ಇಂಥ ಪುಣ್ಯಭೂಮಿಯಲ್ಲಿ ಹಲವಾರು ಮತಾಚಾರ್ಯರು-ಮತೋದ್ಧಾರಕರು ಅವತರಿಸಿ ತಾವೂ ನಡೆದ ಧರ್ಮದ ಮಾರ್ಗದಲ್ಲಿ ಜನತೆಯನ್ನು ಮುನ್ನೆಡೆಸಿದ್ದಾರೆ. ಅವರು ಧರ್ಮವನ್ನು ಕೇವಲ ಪುರಾತನ-ಸಂಪ್ರದಾಯಗಳಿಗೆ ಮೀಸಲಿರಿಸದೆ ಮಾನವ ಕಲ್ಯಾಣ, ಸಮಾಜದ ಹಿತ ಹಾಗೂ ಜಾಗತಿಕ ಶಾಂತಿಗಾಗಿ ಬಳಸಿಕೊಂಡದ್ದು ನಿಜಕ್ಕೂ ಪ್ರಶಂಸನೀಯ.

ಈ ಪವಿತ್ರ ನೆಲದಲ್ಲಿ ಜನ್ಮತಾಳಿದ ವೀರಶೈವ ಧರ್ಮ ಇಡೀ ವಿಶ್ವದಲ್ಲಿಯೇ ತತ್ವ ಹಾಗೂ ಕಾಲಗಳೆರಡರಲ್ಲಿಯೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. ಒಂದೇ ಜನ್ಮದಲ್ಲಿ ಇಹ-ಪರಗಳೆರಡನ್ನು ಕರುಣಿಸುವ ವಿಶಿಷ್ಟ ಗುಣವನ್ನು ಸಹ ಪಡೆದುಕೊಂಡಿದೆ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ, ಷಟ್‌ಸ್ಥಲವೇ ಆತ್ಮವಾಗಿರುವ ಇದು ಎಲ್ಲಾ ಧರ್ಮಗಳ ಸಾರಗಳನ್ನು ಒಳಗೊಳ್ಳುವ ಮೂಲಕ ತನ್ನ ವಿಶಿಷ್ಟತೆಯನ್ನು ಮೆರೆಸಿದೆ. ಇಂಥ ಸರ್ವ ಶ್ರೇಷ್ಟವಾದ ವೀರಶೈವ ಧರ್ಮವನ್ನು ಸಂಸ್ಥಾಪಿಸಿದ ಆದಿ ಜಗದ್ಗುರು ಪಂಚಾಚಾರ್ಯರು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ.

ಭಾರತದ ವಿವಿಧ ರಾಜ್ಯಗಳ ಪುಣ್ಯಭೂಮಿಯಲ್ಲಿ ಉದಯಿಸಿರುವ ಶ್ರೀರಂಭಾಪುರಿ ವೀರಸಿಂಹಾಸನ ಪೀಠ, ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಪೀಠ, ಶ್ರೀ ಹಿಮವತ್ಕೇದಾರ ವೈರಾಗ್ಯಸಿಂಹಾಸನ ಪೀಠ. ಶ್ರೀ ಶ್ರೀಶೈಲ ಸೂರ್ಯಸಿಂಹಾಸನ ಪೀಠ ಹಾಗೂ ಶ್ರೀ ಕಾಶೀ ಜ್ಞಾನ ಸಿಂಹಾಸನ ಪೀಠ ಮತ್ತು ಎಲ್ಲ ಪೀಠಗಳ ಸಾವಿರಾರು ಶಾಖಾ ಮಠಗಳು ಸನಾತನ ಮತ್ತು ವಿನೂತನ ವಿಚಾರಧಾರೆಗಳನ್ನು ಸಮನ್ವಯಗೊಳಿಸಿಕೊಂಡು ಸದಾ ಧಾರ್ಮಿಕ ಜಾಗೃತಿಯನ್ನುಂಟು ಮಾಡುತ್ತ ಜನರಲ್ಲಿ ಸಾಮಾಜಿಕ ಕಾಳಜಿಯನ್ನು ಮೂಡಿಸುತ್ತಾ ಬಂದಿವೆ.

ಸಾಮಾಜಿಕ ಸಮಾನತೆಯನ್ನು ಬೋಧಿಸುವ ಮೂಲಕ ಶ್ರೇಣಿಕೃತ ವ್ಯವಸ್ಥೆಯನ್ನು ದೂರೀಕರಿಸಿ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ಕೊಡುಗೆ ಕೊಟ್ಟ ಶ್ರೀ ಪಂಚಪೀಠಾಚಾರ್ಯರು, ಧಾರ್ಮಿಕ ಸಂಸ್ಕಾರಗಳು, ಸಾಮಾಜಿಕ ಕಾರ್ಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆರೋಗ್ಯದಾಯಕವಾಗಿ ಕಾರ್ಯಗತಗೊಳಿಸಲು ಉತ್ತಮ ಪರಿಸರವನ್ನು ನೆಲೆಗೊಳಿಸಿ ಸಕಲ ಜನಾಂಗದ ಅಭ್ಯುದಯಕ್ಕೆ ಕಾರಣೀಭೂತರಾಗಿದ್ದಾರೆ.

ಅಹಿಂಸಾ ಸತ್ಯ ಮಸ್ತೇಯಂ, ಬ್ರಹ್ಮಚರ್ಯಂ ದಯಾಕ್ಷಮಾ ದಾನಂ ಪೂಜಾ ಜಪೋಧ್ಯಾನ ಮಿತಿ ಧರ್ಮಸ್ಯ ಸಂಗ್ರಹಃ॥ ಎಂಬ ಉದಾತ್ತ ಪರಂಪರೆಯಲ್ಲಿ ಸಾಗಿಬರುತ್ತಿರುವ ಪರಮ ಪಂಚಪೀಠಗಳು ಮತ್ತು ಶಾಖಾ ಮಠಗಳು; ಧರ್ಮ, ಸಂಸ್ಕೃತಿ, ಸಮಾಜ ಎದುರಿಸುತ್ತಿರುವ ತತ್ಕಾಲೀನ ಸಮಸ್ಯೆ-ಸವಾಲುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾವಣಗೆರೆ ಮಹಾನಗರದಲ್ಲಿ ರಾಷ್ಟ್ರೀಯ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಹಮ್ಮಿಕೊಂಡಿರುವುದು ಸಮಾಜ ಬಾಂಧವರಿಗೆ ಸಂತಸವನ್ನು ತಂದಿದೆ.