ಅರಸೀಕೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಅರಸೀಕೆರೆ ತಾಲೂಕು ಅಧ್ಯಕ್ಷ ಹಾಗೂ ಸದಸ್ಯರ ಚುನಾವಣೆ ರದ್ದುಗೊಳಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಸಿ.ಎಂ. ಪ್ರಶಾಂತ್‌ಕುಮಾರ್ ತಿಳಿಸಿದ್ದಾರೆ.
ಅರಸೀಕೆರೆ ತಾಲೂಕಿನಲ್ಲಿ ಅನಧಿಕೃತವಾಗಿ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಈ ಚುನಾವಣೆಯನ್ನು ರಾಜ್ಯ ಚುನಾವಣಾ ಅಧಿಕಾರಿ ಎಂ.ಬಿ.ದೇವೇರಿ ರದ್ದುಗೊಳಿಸಿ ಆದೇಶ ಮಾಡಿದ್ದಾರೆ. ಅಲ್ಲದೇ, ಕೆ.ಬಿ.ಚಂದ್ರಶೇಖರ್ ಅವರು ಅಕ್ರಮವಾಗಿ ಸಹಾಯಕ ಚುನಾವಣಾಧಿಕಾರಿ ಎಂದು ಕರ್ತವ್ಯ ನಿರ್ವಹಿಸಿರುವುದಲ್ಲದೆ, ಚುನಾವಣಾ ಕರ್ತವ್ಯದ ಕುತಂತ್ರ ಹಾಗೂ ಮೋಸದ ಕಾರ್ಯನಿರ್ವಹಿಸಿದ್ದು, ಇದು ಬೆಳಕಿಗೆ ಬಂದ ಕಾರಣ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಕೆ.ಬಿ. ಚಂದ್ರಶೇಖರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೀರಶೈವ ಲಿಂಗಾಯತ ಯುವ ಸೇನೆ ಜಿಲ್ಲಾಧ್ಯಕ್ಷ ಲೋಕೇಶ್ ರಿಲಯನ್ಸ್ ಮಾತನಾಡಿ, ತಾಲೂಕು ಚುನಾವಣೆ ಅಕ್ರಮವಾಗಿ ನಡೆದಿದ್ದು, ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ಸರಿಯಾಗಿ ಮಾಡದೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಳು ಮುಗಿಯುವ ಮುಂಚೆಯೇ ಏಕಾಏಕಿ ಅಧ್ಯಕ್ಷ ಹಾಗೂ ಸದಸ್ಯರನ್ನು ಘೋಷಣೆ ಮಾಡಿದ್ದಾರೆ.
ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಕೇಂದ್ರ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದು, ತಕ್ಷಣ ಕೇಂದ್ರ ಚುನಾವಣಾಧಿಕಾರಿಗಳು ಈ ಎಲ್ಲ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಚುನಾವಣಾ ದಿನಾಂಕ ಪ್ರಕಟಿಸಲಾಗುವುದು ಎಂದು ಆದೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಭವ್, ರವೀಶ್, ಜಗದೀಶ್ ಮತ್ತಿತರರಿದ್ದರು.