ಜಿಲ್ಲೆ

ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವಂತೆ ವೀರಶೈವ-ಲಿಂಗಾಯತರ ಹಕ್ಕೋತ್ತಾಯ ಪ್ರತಿಭಟನೆ

ತುಮಕೂರು

ವೀರಶೈವ-ಲಿಂಗಾಯತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ಬೃಹತ್ ಹಕ್ಕೋತ್ತಾಯ ಮೆರವಣಿಗೆ ನಡೆಸಿ ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಚಿಕ್ಕತೊಟ್ಲುಕೆರೆ ಅಟವಿ ಸುಕ್ಷೇತ್ರದ ಶ್ರೀ ಶಿವಲಿಂಗಸ್ವಾಮೀಜಿ, ಮಾಕನಹಳ್ಳಿ ಮಠದ ಶ್ರೀಗಂಗಾಧರ ಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವಸ್ವಾಮೀಜಿ, ದೊಡ್ಡಗುಣಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ವೃತ್ತದಿಂದ ಸಹಸ್ರಾರು ಸಂಖ್ಯೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಬಾಂಧವರು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ವರೆಗೆ ಹಕ್ಕೋತ್ತಾಯ ಮೆರವಣಿಗೆ ನಡೆಸಿ ಎಸಿ ವಿ.ಅಜಯ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂದಿಧ್ವಜ, ವೀರಗಾಸೆ ಕಲಾವಿದರು ಹೋರಾಟಕ್ಕೆ ಮೆರಗು ತಂದರು.

ಶಿಫಾರಸಿಗೆ ಆಗ್ರಹ: ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯದವರನ್ನು ಸೇರಿಸಲಾಗಿದೆ. ಆದರೆ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಿಲ್ಲ.ಇದರಿಂದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸೇರಿದಂತೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಉಪಪಂಗಡಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಿ ಈವರೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಅಟವಿ ಸುಕ್ಷೇತ್ರದ ಶ್ರೀ ಶಿವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಒಕ್ಕೊರಲಿನಿಂದ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗೊಲ್ಲಹಳ್ಳಿಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ಹರಳೂರು ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಪಾವರ್ತಿ ಕಾರೆಡ್ಡಿ, ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ಪ್ರಧಾನಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಎಸ್.ಡಿ.ದಿಲೀಪ್ ಕುಮಾರ್, ಚಂದ್ರಮೌಳಿ, ಗುರುಕುಲ ಮಲ್ಲಿಕಾರ್ಜುನಯ್ಯ, ಜಯರಾಂ, ಕೋಶಾಧ್ಯಕ್ಷ ಎಂ.ಬಿ.ಶೇಖರ್,ರಾಷ್ಟ್ರೀಯಸಮಿತಿ ಸದಸ್ಯ ರಾಜಶೇಖರ್, ಯುವ ಘಟಕದ ರಕ್ಷಿತ್, ಸತೀಶ್, ಮಂಜುನಾಥ್, ವಿಜಯಕುಮಾರ್, ರುದ್ರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ನಿಟ್ಟೂರು ಪ್ರಕಾಶ್, ವೀರಶೈವ ಸಮಾಜದ ಗೌರವ ಕಾರ್ಯದರ್ಶಿ ಅತ್ತಿರೇಣುಕಾನಂದ ಮತ್ತಿತರರು ಉಪಸ್ಥಿತರಿದ್ದರು.