ಬೆಳಗಾವಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತ್ಯುತ್ಸವವನ್ನು ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು. ಮಹಾಂತೇಶ ಕವಟಗಿಮಠ, ಶಿವಮೂರ್ತಿ ಸ್ವಾಮೀಜಿ, ಬಸವರಾಜ ದೇವರು, ಡಾ.ಎಸ್.ಎಂ.ಗಂಗಾಧರಯ್ಯ, ವಿದ್ಯಾವತಿ ಭಜಂತ್ರಿ, ರತ್ನಪ್ರಭಾ ಬೆಲ್ಲದ ಇತರರಿದ್ದರು. 
ಜಿಲ್ಲೆ

ವೀರಶೈವ ಲಿಂಗಾಯತ ಸಮುದಾಯ ಒಂದಾಗಲಿ

ಬೆಳಗಾವಿ: ಒಡೆದು ಹೋಗುತ್ತಿರುವ ವೀರಶೈವ ಲಿಂಗಾಯತ ಸಮುದಾಯ ಒಂದುಗೂಡಿಸುವ ಜವಾಬ್ದಾರಿ ಜಂಗಮರ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. 1972ರಲ್ಲಿ ಹಾವನೂರು ಆಯೋಗ ಬಂದ ಸಂದರ್ಭದಲ್ಲಿ ಕಾಯಕದ ಆಧಾರದಲ್ಲಿ ವೀರಶೈವ ಸಮುದಾಯ ಒಡೆಯುವಂತ ಕಾರ್ಯವನ್ನು ಅಂದಿನ ದೇವರಾಜ ಅರಸು ಸರ್ಕಾರ ಮಾಡಿತು. ಮೀಸಲಾತಿಗೋಸ್ಕರ ಉಪಪಂಗಡಗಳನ್ನು ಮಾಡಿ, ವೀರಶೈವ ಲಿಂಗಾಯತ ಪದವನ್ನೇ ತೆಗೆದು ಹಾಕುವ ಕೆಲಸವಾಯಿತು. ಆದರೆ, ನಾವು ಯಾವುದೇ ಕೆಟಗೇರಿಯಲ್ಲಿದ್ದರೂ ಮೀಸಲಾತಿ ವಿಚಾರ ಬಂದಾಗ ವೀರಶೈವ ಲಿಂಗಾಯತರು ಒಂದೇ ಎನ್ನಬೇಕು ಎಂದರು. ಈಗಿನ ಜಾತಿಗಣತಿ ಅವೈಜ್ಞಾನಿಕವಾಗಿದೆ. ಉಪಪಂಗಡಗಳನ್ನು ಬರೆಯುವ ಭರದಲ್ಲಿ ವೀರಶೈವ ಲಿಂಗಾಯತ ಪದವನ್ನೇ ಮರೆಯಲಾಗುತ್ತಿದೆ. ಹೀಗಾಗಿ ಜನಗಣತಿಯಲ್ಲಿ 50 ಲಕ್ಷಕ್ಕೆ ಬಂದು ನಿಂತಿದ್ದೇವೆ. ಯಾವುದೇ ಉಪಪಂಗಡಗಳಿರಲಿ ಒಂದಾಗಬೇಕು. ಈ ವಿಷಯದಲ್ಲಿ ಮಠಾೀಶರು ಮಾರ್ಗದರ್ಶನ, ಸಲಹೆ ನೀಡುವ ಅಗತ್ಯವಿದೆ ಎಂದರು. ರೇಣುಕಾಚಾರ್ಯರ ಜಯಂತಿ ಕೇವಲ ಜಂಗಮರ, ಸರ್ಕಾರಿ ಜಯಂತಿ ಆಗಬಾರದು. ಸಮಾಜದ ಜಯಂತಿ ಆಗಬೇಕು. ರೇಣುಕಾಚಾರ್ಯರರ ಜಯಂತಿ ಅರ್ಥಪೂರ್ಣ ಮತ್ತು ಯಶಸ್ವಿಯಾಗಿದೆ ಎಂದು ಸಂತಸಪಟ್ಟರು.

ವಿಜಯಪುರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಎಂ.ಗಂಗಾಧರಯ್ಯ ವಿಶೇಷ ಉಪನ್ಯಾಸ ನೀಡಿ, ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಪುಸ್ತಕ ಓದಿ ತಿಳಿದುಕೊಂಡವರ ಜೀವನ ಅದ್ಭುತ ದಾರಿಯಲ್ಲಿ ಸಾಗುತ್ತದೆ. ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮಾಜದ ಜನರಿಗೆ ಅನ್ನ ಮತ್ತು ಆಶ್ರಯಗಳನ್ನು ನೀಡುತ್ತ ಬಂದಿವೆ. ಉತ್ತರ ಕರ್ನಾಟಕದ ಮಠಗಳ ಕಾರ್ಯ ಮೆಚ್ಚುವಂತದ್ದು, ಹೀಗೆ ವೀರಶೈವ ಲಿಂಗಾಯತ ಸಮುದಾಯ ಎಲ್ಲರೊಂದಿಗೆ ಒಂದಾಗಿ ನಡೆಯಬೇಕು ಎಂದರು. ಅರಳಿಕಟ್ಟೆಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ವೀರಶೈವ ಸಮುದಾಯದ ಎಲ್ಲರೂ ಒಂದಾಗಬೇಕು, ಲಿಂಗ ಧರಿಸಬೇಕು, ವಿಭೂತಿ ಹಚ್ಚಬೇಕು, ಶಿವನ ಧ್ಯಾನ ಮಾಡಬೇಕು ಮತ್ತು ಸಿದ್ಧಾಂತ ಶಿಖಾಮಣಿ ಹಾಗೂ ಶರಣರ ವಚನಗಳನ್ನು ಮಕ್ಕಳಿಗೆ ಓದಲು ಹೇಳಬೇಕು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಹುಣಶೀಕಟ್ಟಿ ಹಿರೇಮಠದ ಬಸವರಾಜ ದೇವರು, ವಿದ್ಯಾವತಿ ಭಜಂತ್ರಿ, ಚಂದ್ರಶೇಖರಯ್ಯ ಸವಡಿ, ಕಲ್ಲಪ್ಪ ಗಾಣಗೇರ, ಪ್ರಮೊದಕುಮಾರ ವಕ್ಕುಂದಮಠ, ವಿಜಯ ಜಾಧವ, ಎಂ.ಬಿ. ಝಿರಲಿ, ರತ್ನಪ್ರಭಾ ಬೆಲ್ಲದ, ನೀಲಗಂಗಾ ಚರಂತಿಮಠ, ಸಿ.ಬಿ.ಸಂಗೊಳ್ಳಿ, ಬಸವರಾಜ ಹಳಂಗಡಿ ಹಾಗೂ ಕಿರುತೆರೆ ನಟರಾದ ಮಲ್ಲು ಬಾಗಲಕೋಟ, ಪ್ರಿಯಾ ಸವಡಿ, ಶ್ರೀಶೈಲ ಮಠದ ಇದ್ದರು. ರೇಣುಕಾಚಾರ್ಯರ ಜಯಂತಿ ಅಂಗವಾಗಿ ಚನ್ನಮ್ಮ ವೃತ್ತದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಬಿಮ್ಸ್ ರಸ್ತೆ ಹಾಗೂ ಕೃಷ್ಣ ದೇವರಾಯ ವೃತ್ತದ ಮೂಲಕ ಕುಮಾರ ಗಂಧರ್ವ ಕಲಾಮಂದಿರದವರೆಗೆ ನಡೆಯಿತು.