ದೊಡ್ಡಬಳ್ಳಾಪುರ : ವೀರಶೈವ, ಲಿಂಗಾಯತ ಎರಡೂ ಒಂದೇ. ರಾಜಕೀಯ ಹಾಗೂ ಇತರ ಕಾರಣಗಳಿಗಾಗಿ ಸಮುದಾಯವು ಒಳ ಪಂಗಡಗಳಾಗಿ ಕವಲು ದಾರಿಯಲ್ಲಿ ಸಾಗಿವೆ. ಇದರಿಂದ ಸಮುದಾಯದ ಶಕ್ತಿ ಕುಂದುತ್ತಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿನ ಬಸವ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಹಾಗೂ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರುಗಳು, ರಾಜ್ಯದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಆದರೆ ವೀರಶೈವ, ಲಿಂಗಾಯತರು ಬೇರ್ಪಟ್ಟು ಏನೂ ಸಾಧಿಸಲಾಗದು. ಸಂಟಿತರಾಗಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಹಾಗಾಗಿ ಒಳಪಂಗಡಗಳನ್ನು ಬೇರೆ ಮಾಡುವವರ ಮಾತಿಗೆ ಬೆಲೆ ನೀಡದೆ, ಎಲ್ಲ ಒಳಪಂಗಡಗಳು ಒಂದಾಗಬೇಕು, ಸಮುದಾಯದ ನತೆ ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಜಾತಿಗಣತಿ ಅವೈಜ್ಞಾನಿಕವಾಗಿದ್ದು, ಇದಕ್ಕೆ ಸಮುದಾಯದ ವಿರೋಧವಿದೆ ಎಂದರು.
ತಾಲೂಕು ವೀರಶೈವ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಬಸವರಾಜು ಮಾತನಾಡಿ, ಟ್ರಸ್ಟ್ನಿಂದ ಬಸವ ಪೀಠ ಹೆಸರಿನ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಜಮೀನು ಗುರುತಿಸಲಾಗಿದೆ ಎಂದರು. ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ, ಉಪಾಧ್ಯಕ್ಷ ಹರೀಶ್ ಆರಾಧ್ಯ, ಯುವ ಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಸಮುದಾಯದ ಜಿ.ಮರಿಸ್ವಾಮಿ, ಶಿವನಂಜಪ್ಪ, ಲೋಕೇಶ್ವರ್, ಯುವ ಟಕದ ಜಿಲ್ಲಾಧ್ಯಕ್ಷ ಲೋಕೇಶ್, ತಾಲೂಕು ಅಧ್ಯಕ್ಷರಾದ ಸುಜಯ್ಕುಮಾರ್, ಮೋಹನ್ಕುಮಾರ್, ಖಜಾಂಚಿ ಈರಣ್ಣ, ಜಿಲ್ಲಾ ನಿರ್ದೇಶಕ ಪಿ.ಪ್ರಭಾಕರ್ ಇದ್ದರು.
ರೇಣುಕ, ಬಸವ ತತ್ವಗಳೇ ಸಮುದಾಯಕ್ಕೆ ಸಂವಿಧಾನ : ವೀರಶೈವ&ಲಿಂಗಾಯತ ಧರ್ಮ ಎಲ್ಲ ಧರ್ಮಗಳ ಸಾರವನ್ನೂ ಒಳಗೊಂಡಿದೆ. ಸಮುದಾಯಕ್ಕೆ ರೇಣುಕಾಚಾರ್ಯ ಹಾಗೂ ಬಸವಣ್ಣನವರ ತತ್ವ&ಸಿದ್ಧಾಂತಗಳ ಸಂವಿಧಾನವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಹೇಳಿದರು. ಎಡಿಯೂರು ಮಠದ ಶ್ರೀ ರೇಣುಕ ಶಿವಾಚಾರ್ಯರು ಮಾತನಾಡಿ, ಲಿಂಗಧರಿಸಿದರೆ ಸಾಲದು, ಅದಕ್ಕೆ ಸಲ್ಲಬೇಕಾದ ಮನ್ನಣೆ ನೀಡಬೇಕು. ಇಷ್ಟಲಿಂಗ ಪೂಜೆ ನಿರಂತರವಾಗಿದ್ದರೆ ಸಮುದಾಯ ಒಗ್ಗೂಡಲು ನೆರವಾಗಲಿದೆ ಎಂದರು.