ಚಿತ್ರದುರ್ಗ: ವೀರಶೈವ ಲಿಂಗಾಯತ ಜಂಗಮರಿಗೆ ನೀಡಿರುವ ಬೇಡ ಜಂಗಮ ಎಸ್ಸಿ ಪ್ರಮಾಣ ಪತ್ರ ವಾಪಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಎಸ್ಸಿ ಜಾತಿ ಪ್ರಮಾಣ ಪತ್ರ ವಿತರಿಸಿದ್ದು, ಸೂಕ್ತ ತನಿಖೆ ನಡೆಸಿ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‌ಸಿ ಪ್ರಮಾಣ ಪತ್ರಕ್ಕೆ ಹೋರಾಡುತ್ತಿರುವ ಬಿ.ಡಿ.ಹಿರೇಮಠ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಪುತ್ರಿಗೆ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಬೇಡ ಜಂಗಮರಲ್ಲದವರಿಗೆ ನೀಡಿರುವ ಎಸ್‌ಸಿ ಜಾತಿ ಪ್ರಮಾಣ ಪತ್ರಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.