ರಾಯಚೂರು: ಮಾ.19ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಗರದ ವೀರಶೈವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮುರಳೀಧರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಡಿಇಡಿ ಮತ್ತು ಬಿಇಡಿ, ಬಿಪಿಎಡ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೇಳವನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 180 ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ನುರಿತ ಶಿಕ್ಷಕರ ಕೊರತೆ ಎದುರಿಸುತ್ತಿವೆ. ವಿಜ್ಞಾನ ಮತ್ತು ಗಣಿತ ಶಿಕ್ಷಕರ ಸಮಸ್ಯೆ ಹೆಚ್ಚಾಗಿದೆ. ಕರೊನಾ ಸಂದರ್ಭದಲ್ಲಿ ಶಿಕ್ಷಕ ವೃತಿಯಿಂದ ವಿಮುಖರಾಗಿದ್ದರು. ಹೀಗಾಗಿ ಶಿಕ್ಷಕರ ಕೊರತೆ ಉಂಟಾಗಿದೆ ಎಂದರು.
ಮೇಳದಲ್ಲಿ ಸುಮಾರು 120ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಡಾ.ಗುರುರಾಜ ಕರ್ಜಗಿಯಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿ.ಕೆ.ಮುರಳೀಧರ ತಿಳಿಸಿದರು.
ಬಿಇಡಿ ಶಿಕ್ಷಣ ಮಹಾವಿದ್ಯಾಲಯಗಳ ಯುವ ಪ್ರಶಿಕ್ಷಕರ ಸಂಘದ ಅಧ್ಯಕ್ಷ ವಿಜಯರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 15 ಬಿಇಡಿ ಕಾಲೇಜುಗಳಿದ್ದು, ಪ್ರತಿವರ್ಷ 1,100 ಶಿಕ್ಷಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಸಂಸ್ಥೆ ತಾಲೂಕು ಅಧ್ಯಕ್ಷ ಎಸ್.ಎಲ್.ಕೇಶವರೆಡ್ಡಿ, ಪದಾಧಿಕಾರಿ ಚಂದ್ರಕಾಂತ ಮನೋಳ್ಳಿ ಉಪಸ್ಥಿತರಿದ್ದರು.