ಜಿಲ್ಲೆ

ಫೆ.14ರಂದು ವಿಧಾನಸೌಧ ಚಲೋ ಪಾದಯಾತ್ರೆ: ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಗಣೇಶಾರಾಧ್ಯ ಮಾಹಿತಿ

ಮಂಡ್ಯ: ವೀರಶೈವ ಲಿಂಗಾಯತ ಅರ್ಚಕ ಪುರೋಹಿತ ಆಗಮಿಕ ಹಾಗೂ ವೇದ ಆಗಮ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.14ರಂದು ಬೆಳಗ್ಗೆ 8.15ಕ್ಕೆ ಮೈಸೂರಿನಿಂದ ವಿಧಾನಸೌಧ ಚಲೋ ಬೃಹರ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಗಣೇಶಾರಾಧ್ಯ ತಿಳಿಸಿದರು.

ಪಾದಯಾತ್ರೆ 17ರ ಸಂಜೆ ವೇಳೆಗೆ ಬೆಂಗಳೂರು ತಲುಪಲಿದೆ. 18ರಂದು ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದ ಮೂಲಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಧಾರ್ಮಿಕದತ್ತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೃಹತ್ ಪಾದಯಾತ್ರೆ ಮೈಸೂರಿನ ಚಾಮುಂಡಿ ತಪ್ಪಲಿನಿಂದ ಪ್ರಾರಂಭಗೊಳ್ಳಲಿದೆ. ಇದಕ್ಕೂ ಮುನ್ನ ವೇದವಿದ್ವಾನ್ ಗ್ರಂಥ ಕತೃಗಳಾದ ವಿದ್ವಾನ್ ನಂಜುಂಡಾರಾಧ್ಯ ಹಾಗೂ ಪಂಡಿತ್ ಕಾಶಿನಾಥ ಶಾಸ್ತ್ರಿಗಳು ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಯ ಯಶಸ್ಸಿಗೆ ಸಂಕಲ್ಪಿಸಲಾಗುವುದು. 200ಕ್ಕೂ ಹೆಚ್ಚು ಪಾದಯಾತ್ರಿಕರು ಪಾಲ್ಗೊಳ್ಳುವರು ಎಂದು ನುಡಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರ ಪರಂಪರೆ ದೇವಾಲಯ, ಅರ್ಚಕ ಆಗಮಿಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಡಿಕೆಗಳನ್ನು ಈಡೇರಿಸಲು ದಶಕಗಳ ಕಾಲದಿಂದಲೂ ನಿರ್ಲಕ್ಷಿೃಸಿವೆ. ಹಿಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ 17,800 ಮುಜರಾಯಿ ದೇವಾಲಯ, 19 ವೇದಾಗಮ ಶಾಲೆ ಹಾಗೂ ಪೂಜಾ ಕೈಂಕರ್ಯ ಕಡೆಗಣಿಸಿದೆ. ಸರ್ಕಾರ ವೇದಾಗಮ ಶಾಲೆಗೆ ಪಠ್ಯಕ್ರಮವನ್ನು ಎಲ್ಲೂ ಕೊಟ್ಟಿಲ್ಲ. ದೇವಾಲಯ ಹಾಗೂ ವೇದಾಗಮ ಶಾಲೆಗಳ ಅಹವಾಲು ಸ್ವೀಕರಿಸಲು ವೀರಶೈವ ಆಗಮ ಪಂಡಿತರನ್ನು ನೇಮಕ ಮಾಡಿಲ್ಲ ಎಂದು ದೂರಿದರು.

ಸಂಘದ ರಾಜ್ಯಾಧ್ಯಕ್ಷ ಬಸವರಾಜ್, ಗೌರವಾಧ್ಯಕ್ಷ ದಿನೇಶ್, ನಿರ್ದೇಶಕ ವೀರೇಶ್, ಕಾರ್ಯದರ್ಶಿ ಪ್ರಸಾದ್ ಇದ್ದರು.