ಜಿಲ್ಲೆ

ಬಸವತತ್ವ ಗೌರವಿಸುವ ವೀರಶೈವ, ಲಿಂಗಾಯತ ಪರಂಪರೆ

ಅಕ್ಕಿಆಲೂರ: ವೀರಶೈವ, ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು. ಎಂದಿಗೂ ಬೇರೆಯಾಗುವ ಪ್ರಶ್ನೆಯೆ ಇಲ್ಲ. ಎರಡೂ ಪರಂಪರೆ ಬಸವತತ್ವ ಗೌರವಿಸುತ್ತವೆ ಎಂದು ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಮುತ್ತಿನಕಂತಿ ಮಠದಲ್ಲಿ ಲಿಂ. ವೀರರಾಜೇಂದ್ರ ಶಿವಾಚಾರ್ಯ ಶ್ರೀಗಳ 29ನೇ ಪುಣ್ಯಸ್ಮರಣೋತ್ಸವ ಮತ್ತು ಮುತ್ತಿನಕಂತಿ ಮಠದ ಹೊಸ್ತಿಲು ಪೂಜೆ ಸಮಾರಂಭದ ಪ್ರಯುಕ್ತ ಆಯೋಜಿಸಿರುವ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಪಂಚಾಚಾರ್ಯರು ಹಾಕಿಕೊಟ್ಟ ಗುರು ವಿಚಾರಧಾರೆ ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳು ಪ್ರತಿಪಾದಿಸಿದ ವಿರಕ್ತ ಸಂಪ್ರದಾಯ ವೀರಶೈವ ಲಿಂಗಾಯತರ ಜತೆಗೆ ಸರ್ವ ಸಮಾಜದವರ ಕಲ್ಯಾಣ ಬಯಸುತ್ತದೆ. ವೀರಶೈವ, ಲಿಂಗಾಯತರು ಪ್ರತ್ಯೇಕವಾಗುವ ಧ್ವನಿಗೆ ರ್ತಾಕ ಅಂತ್ಯ ಹಾಡಬೇಕಾಗಿದೆ. ನಾಡಿನ ಗುರು ಮತ್ತು ವಿರಕ್ತಮಠ ಸ್ವಾಮೀಜಿಗಳು, ನಾವೆಲ್ಲ ಒಂದೇ ಎಂಬ ಭಾವನೆ ಹೊಂದುವ ಜತೆಗೆ ಬಸವ ತತ್ವ ಗೌರವಿಸಬೇಕು ಎಂದರು.

ಹಾವೇರಿ ಬಣ್ಣದಮಠದ ರುದ್ರಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

ಮಣಕವಾಡ ದೇವಮಂದಿರದ ಮೃತ್ಯಂಜಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ತುಪ್ಪದಕುರಹಟ್ಟಿಯ ಡಾ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿರಸಿ ಮಲ್ಲಿಕಾರ್ಜುನ ಶ್ರೀ, ಚಂದ್ರಶೇಖರ ಶಿವಾಚಾರ್ಯ ಶ್ರೀ, ಉದ್ಯಮಿಗಳಾದ ಗಂಗಪ್ಪ ಸಾಲವಟಿಗಿ, ಪ್ರಭಣ್ಣ ಬೆಲ್ಲದ ಉಪಸ್ಥಿತರಿದ್ದರು.

ಅಕ್ಕಿಆಲೂರ ಗ್ರಾಪಂಗೆ ನೂತನವಾಗಿ ಆಯ್ಕೆಯಾದ 31 ಸದಸ್ಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿಗಳನ್ನು ಭವ್ಯ ಬೈಕ್ ರ‍್ಯಾಲಿ ಮೂಲಕ ಪಟ್ಟಣಕ್ಕೆ ಸ್ವಾಗತಿಸಲಾಯಿತು. ದುಂಡಿ ಬಸವೇಶ್ವರ ದೇವಸ್ಥಾನದಿಂದ ನೂರಾರು ಮಹಿಳೆಯರು ಆರತಿಯೊಂದಿಗೆ ಮುತ್ತಿನಕಂತಿ ಮಠದವರೆಗೂ ಎಲ್ಲ ಪೂಜ್ಯರನ್ನು ಬರಮಾಡಿಕೊಂಡರು.

ಮುತ್ತಿನಕಂತಿಮಠದಲ್ಲಿಂದು

ಏ. 3ರಂದು ಸಂಜೆ 6ಗಂಟೆಗೆ ಧರ್ಮಸಭೆ ಆಯೋಜಿಸಲಾಗಿದೆ. ಬಂಕಾಪುರ ಅರಳಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಶ್ರೀ, ರಾಣೆಬೆನ್ನೂರ ಶಿವಯೋಗಿ ಶಿವಾಚಾರ್ಯ ಶ್ರೀ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಶ್ರೀ, ಹೊಸಪೇಟೆಯ ಜಗದೀಶ್ವರ ಶ್ರೀ, ಚನ್ನಗಿರಿಯ ಡಾ.ಬಸವಜಯಚಂದ್ರ ಶ್ರೀ, ತಿಪ್ಪಾಯಿಕೊಪ್ಪದ ಮಹಾಂತ ಶ್ರೀ, ಶಿರೂರ ಮರಿಮಹಾಂತ ದೇವರು ಸಾನ್ನಿಧ್ಯ ವಹಿಸುವರು. ಮುಖಂಡರಾದ ರಾಜಣ್ಣ ಗೌಳಿ, ಶಶಿಧರ ಮುತ್ತಿನಕಂತಿ ಮಠ, ಬಸವರಾಜ ಎಲಿ, ರವಿಕುಮಾರ ಎಚ್.ಎಸ್, ನಾಗಪ್ಪ ಸವದತ್ತಿ ಸೇರಿ ಮತ್ತಿತರರು ಭಾಗಿಯಾಗಲಿದ್ದಾರೆ. ಹಾವಣಗಿ, ಕೂಸನೂರ, ಹಿರೂರ ಗ್ರಾಪಂ ಸದಸ್ಯರಿಗೆ ಸನ್ಮಾನ ಜರುಗಲಿದೆ.