ತುಮಕೂರು: ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆವಹಿಸಬೇಕು. ಈ ಸಮಸ್ಯೆಗೆ ಇತಿಶ್ರೀ ಹಾಡಬೇಕಿರುವುದು ಈ ದೇಶದ ಪ್ರಧಾನಿ ಹಾಗೂ ಸುಪ್ರೀಂಕೋರ್ಟ್. ಇವರಿಬ್ಬರು ಮಧ್ಯ ಪ್ರವೇಶಿಸದೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಮಾಜಿ ಸಿಎಂ, ಕೇಂದ್ರ ಮಾಜಿ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ, ಕರ್ನಾಟಕ, ತಮಿಳುನಾಡು ಮೂರು ರಾಜ್ಯಕ್ಕೂ ಕುಡಿಯಲು, ಕೃಷಿಗೆ ಕಾವೇರಿ ನೀರು ಬೇಕು. ಅದನ್ನು ಸಮತೋಲನ, ಸಮನ್ವಯತೆಯಿಂದ ಬಳಸುವುದರಿಂದ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ದಕ್ಷಿಣ ಆಫ್ರಿಕಾದಲ್ಲು ಉಭಯರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಸಮಸ್ಯೆ ಉದ್ಭವಿಸಿತ್ತು. ಅದಕ್ಕೆ ಅವರು ಒಂದು ಕಾನೂನು ತಂದರು. ಆ ಕಾನೂನಿನ ಮೂಲಕ ಯಾವುದೇ ಸಮಸ್ಯೆ ಉಲ್ಬಣ ಆಗಲಿಲ್ಲ. ಎಲ್ಲರಿಗೂ ನೀರು ಬಂತು. ಅದೇ ರೀತಿಯ ಕಾನೂನನ್ನು ಇಲ್ಲಿ ತರಬೇಕು ಅಂತ ನಾನು ಸಲಹೆ ಕೊಡುತ್ತೀನಿ. ಇಂತಹ ಸಮಸ್ಯೆಗಳನ್ನೂ ರಾಜೀ ಒಪ್ಪಂದ ಮಾಡಿಕೊಂಡು ಎಲ್ಲರಿಗೂ ನ್ಯಾಯ ಕೊಡಬೇಕು. ರಾಜ್ಯ ರಾಜ್ಯದ, ವರ್ಗ, ವ್ಯಕ್ತಿ, ವ್ಯಕ್ತಿಗಳ ಮಧ್ಯೆ ಸಮಸ್ಯೆಗಳು ಬಂದಾಗ ಮರ್ಚೆಂಟ್ ಆಫ್ ವೆನ್ನಿಸ್‌ನಿಂದ ನ್ಯಾಯ ಸಿಗುವುದಿಲ್ಲ. ರಕ್ತ ಬರದೇ ಮಾಂಸ ತೆಗೆಯೋದಿಕ್ಕೆ ಆಗಲ್ಲ. ಹಾಗಾಗಿ, ರಕ್ತವೂ ಉಳಿಯಬೇಕು ಮಾಂಸವು ಉಳಿಯಬೇಕು. ಇದನ್ನು ಸುಪ್ರೀಂಕೋರ್ಟ್ ಮಾಡಬೇಕಿದೆ ಎಂದು ಸಲಹೆಯಿತ್ತರು.