ಜಿಲ್ಲೆ

ಶೇ.3ರಷ್ಟು ಪ್ರತ್ಯೇಕ ಒಳಮೀಸಲಾತಿ ಜಾರಿಯಾಗಲಿ: ಅರುಂದತಿಯಾರ್ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಕೃಷ್ಣ ಆಗ್ರಹ

ಮಂಡ್ಯ: ರಾಜ್ಯ ಸರ್ಕಾರ ಅರುಂದತಿಯಾರ್ ಸಮುದಾಯಕ್ಕೆ ಶೇ.3ರಷ್ಟು ಪ್ರತ್ಯೇಕ ಒಳಮೀಸಲಾತಿ ನೀಡಬೇಕು ಎಂದು ಅರುಂದತಿಯಾರ್ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಕೃಷ್ಣ ಒತ್ತಾಯಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಹಾಸಭಾದ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ ವೀರಾಮಾತೆ ಕುಯಿಲಿ ಅವರ ಪುಣ್ಯಸಂಸ್ಮರಣೆ ದಿನ ಮತ್ತು ಶೇ.3ರಷ್ಟು ಪ್ರತ್ಯೇಕ ಒಳಮೀಸಲಾತಿ ಹೋರಾಟ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಅರುಂದತಿಯಾರ್ ಸಮುದಾಯದ ಸುಮಾರು 30 ಲಕ್ಷ ಜನಸಂಖ್ಯೆಯಿದೆ. ಜೀವನಕ್ಕಾಗಿ ಪೌರಕಾರ್ಮಿಕ, ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕಾೃವೆಂಜರ್ ವೃತ್ತಿಗಳನ್ನು ಮಾಡುತ್ತಿದ್ದಾರೆ. ಇವರೆಲ್ಲರೂ ಅರುಂದತಿಯಾರ್ ಜಾತಿಗೆ ಸೇರುತ್ತಾರೆ. ಪರಿಶಿಷ್ಟ ಜಾತಿಯಲ್ಲಿ ಕಟ್ಟ ಕಡೆಯ ಸ್ಥಾನದಲ್ಲಿದ್ದು, ಹಲವು ಸೌಲಭ್ಯದಿಂದ ವಂಚಿತವಾಗಿದ್ದಾರೆ. ತಕ್ಷಣವೇ 2024ರ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಗಳ ಎಡಗೈ ಗುಂಪಿಗೆ ಸೇರಿದ ಅರುಂದತಿಯಾರ್(ಪೌರ ಕಾರ್ಮಿಕರಿಗೆ) ಸಮುದಾಯವರನ್ನು ತಮಿಳುನಾಡಿನ ಮಾದರಿಯಂತೆ ಪ್ರತ್ಯೇಕವಾಗಿ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಭಾರತದ ಮೈಸೂರಿನ ಮದ್ರಾಸ್ ಸಂಸ್ಥಾನ ಕಾಲದ 400 ವರ್ಷದ ಇತಿಹಾಸವಿರುವ ಅರುಂದತಿಯಾರ್ ಸಮುದಾಯ ಭಾರತದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಇತಿಹಾಸವಿದೆ. ತಮಿಳುನಾಡಿನ ಶಿವಗಂಗೆ ಪ್ರಾಂತ್ಯದ ರಾಣಿ ಮೇಲುನಾಚಿಯಾರ್ ಅವರ ಸೇನಾಧಿಪತಿಯಾಗಿದ್ದ ಏಕೈಕ ವೀರಮಹಿಳೆ ವೀರಮಾತೆ ಕುಯಿಲಿ ಅವರ ಜೀವನ ಚರಿತ್ರೆ ಬೆಳಕಿಗೆ ಬರಬೇಕಿದೆ. ವಿದ್ಯಾವಂತ ಸಮಾಜಕ್ಕೆ ತಿಳಿಯಲು ವಿಜಯದಶಮಿ ದಿನದಂದು ವೀರಮಾತೆ ಕುಯಿಲಿ ಹಸರಿನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಸರ್ಕಾರಿಂದ ಆಗಬೇಕಿದೆ. ಮಾತ್ರವಲ್ಲದೆ ರಾಜ್ಯಸರ್ಕಾರ ಪೌರಕಾರ್ಮಿಕರ ದಿನವನ್ನು ಆಚರಿಸುವ ಸಮಯದಲ್ಲಿ ವೀರಮಾತೆ ಕುಯಿಲಿ, ಒಂಡಿವೀರನ್, ಪೊಲ್ಲಾನ್, ಮಧುರೈ ವೀರನ್, ಐಪಿಡಿ ಸಾಲಪ್ಪ ಅವರ ಭಾವಚಿತ್ರವಿರಿಸಿ ಗೌರವ ಸಮರ್ಪಿಸಬೇಕು ಎಂದು ಹೇಳಿದರು.

ಮಹಾಸಭಾದ ಜಿಲ್ಲಾಧ್ಯಕ್ಷೆ ಕೆ.ನಾಗಮಣಿ, ಪದಾಧಿಕಾರಿಗಳಾದ ಗಣೇಶ್, ರೇಖಾ, ನಾಗಮ್ಮ, ಚಾಮುಂಡಿ, ನಾಗರಾಜ್, ನವೀನ್, ಬಿಜೆಪಿ ಮುಖಂಡ ಬಿ.ಕೃಷ್ಣ, ಜೆಡಿಎಸ್ ಮುಖಂಡ ಪಾಪಯ್ಯ ಇತರರಿದ್ದರು.