ಮಾಂಜರಿ: ಯಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ವಿಶಾಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಗುರುವಾರ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥ ಸಾಗುತ್ತಿದ್ದಂತೆ ಭಕ್ತರಿಂದ ವಿರೂಪಾಕ್ಷ ಲಿಂಗ ಮಹಾರಾಜ್ ಕೀ ಜೈ, ಪಂಚಾಚಾರ್ಯ ಮಹಾರಾಜ ಕೀ ಜೈ, ಹರ ಹರ ಮಹಾದೇವ ಎಂಬ ಜಯ ಘೋಷಣೆಗಳು ಮೊಳಗಿದವು. ರಥವು ವೀರಭದ್ರ ದೇವಸ್ಥಾನದಿಂದ ಹಳೇ ಯಡೂರಿನ ಬಸವೇಶ್ವರ ದೇವಸ್ಥಾನದವರೆಗೆ ಸಾಗಿ ಮರಳಿತು. ನೆರೆದ ಭಕ್ತರು ಹಣ್ಣು-ಜವನ ಎಸೆದು ಹರಕೆ ತೀರಿಸಿದರು. ಶ್ರೀಶೈಲ ಪೀಠದ ಆನೆ, ತಮಟೆ, ನಗಾರಿ, ಸೋಲ್ಲಾಪುರ ಸಿದ್ಧೇಶ್ವರ ದೇವಸ್ಥಾನ ಹಾಗೂ ಶ್ರೀಶೈಲ ಮಠದ ನಂದಿ ಧ್ವಜ, ಛತ್ರಿ ಚಾಮರ, ಬಿರುದಾವಳಿಗಳ ಜತೆಗೆ ಸನಾಯಿ ನಾದಸ್ವರ, ವೀರಗಾಸೆ, ಪೂಜಾ ಕುಣಿತ, ಗಾರುಡಿ ಗೊಂಬೆ, ತಮಟೆ ಮತ್ತು ನಗಾರಿ, ಜಾಂಜ್ ಪಥಾಕ್, ಮರಗಾಲು ಕುಣಿತ, ಡೊಳ್ಳು ಕುಣಿತ, ದೊಡ್ಡವರಸೆ, ವೀರಮಕ್ಕಳ ಕುಣಿತ, ಕರಡಿ ಮಜಲು, ಸುಗ್ಗಿ ಕುಣಿತ, ಗೊರವರ ಕುಣಿತ, ಕೋಲಾಟ ರಥೋತ್ಸವದ ಮೆರುಗು ಹೆಚ್ಚಿಸಿದವು.
ಜಾತ್ರೆ ನಿಮಿತ್ತ ಗುರುವಾರ ಬೆಳಗ್ಗೆ 4 ಗಂಟೆಗೆ ಶ್ರೀ ವೀರಭದ್ರೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಮಾಡಲಾಯಿತು. 6ಕ್ಕೆ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಮಂತ್ರ ವೀರಭದ್ರೇಶ್ವರ ದೇವರ ಲಿಂಗ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ, ಸಂಜೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿದರು.
ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯದಲ್ಲಿ ಅಬ್ಬೆ ತುಮಕೂರು ಸಂಸ್ಥಾನ ಮಠದ ಡಾ.ಗಂಗಾಧರ ಶಿವಾಚಾರ್ಯ ಸ್ವಾಮೀಜಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ಹೂಲಿ ಹಿರೇಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಶಾಳಿನ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಾಂಜರಿಯ ಗುರು ಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸೂಗುರೇಶ್ವರ ಮಠ ನೂಲಿನ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಮದನೂರಿನ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರಿನ ಗೌರಿ ಶಂಕರ ಶಿವಾಚಾರ್ಯ ಸ್ವಾಮೀಜಿ, ಕರಿಬಂಟನಾಳನ ಶಿವಕುಮಾರ ಸ್ವಾಮೀಜಿ, ವೀರಭದ್ರೇಶ್ವರ ದೇವಸ್ಥಾನದ ಉತ್ತರಾಧಿಕಾರಿ ರೇಣುಕಾ ದೇವರು ಪಾಲ್ಗೊಂಡಿದ್ದರು.
ಜಾತ್ರೆಯಲ್ಲಿ ಯಾವುದೇ ಅನಾಹುತ ಮತ್ತು ಅವಘಡಗಳು ಸಂಭವಿಸದಂತೆ ಚಿಕ್ಕೋಡಿ ಉಪವಿಭಾಗೀಯ ಪೊಲೀಸ್ ಅಧಿಕಾರಿಗಳಾದ ಗೋಪಾಲಕೃಷ್ಣ ಗೌಡರ, ವಿಶ್ವನಾಥ ಚೋಗುಲಾ, ಅಂಕಲಿ ಪಿಎಐ ನಂದೀಶ ಸದಲಗಾ, ಪಿಎಸ್‌ಐ ಬಿರಾದಾರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.