ಮಲೇಬೆನ್ನೂರು: ಪಟ್ಟಣದ ಹೊರವಲಯದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ಭಾದ್ರಪದ ಮಾಸದ ಮೊದಲ ಮಂಗಳವಾರದಂದು ಆಚರಿಸುವ ಸೃಷ್ಠಿಕರ್ತ ಪರಮೇಶ್ವರನ ಉಗ್ರರೂಪವೇ ಆಗಿರುವ ಬೆಂಕಿ ಪ್ರಿಯ ಹಾಗೂ ಗುಗ್ಗುಳ ಪ್ರಿಯ ವೀರಭದ್ರೇಶ್ವರ ಜಯಂತ್ಯುತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶರಬಿ ಗುಗ್ಗುಳ, ಪುರವಂತರಿಂದ ಸಂಬಾಳ ವಾದ್ಯಗಳಿಂದ ಗುಗ್ಗುಳ ಹಾಗೂ ವೀರಗಾಸೆ ಜರುಗಿತು.
ಮಂಗಲಮೂರ್ತಿಗೆ 12 ಪುರೋಹಿತರಿಂದ 11 ಸಾವಿರ ರುದ್ರ ಪಾರಾಯಣದ ನಂತರ ರುದ್ರಾಭಿಷೇಕ ನೆರವೇರಿಸಲಾಯಿತು .
ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯಶ್ರೀ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿಯ ಬಿ. ಚಿದಾನಂದಪ್ಪ, ಬಿ. ಪಂಚಣ್ಣ, ಬಿ. ನಾಗೇಂದ್ರಪ್ಪ, ಬಿ.ಎನ್. ವೀರೇಶ್, ಬಿ. ಮಲ್ಲಿಕಾರ್ಜುನ್, ಬಿ. ಉಮಾಶಂಕರ್ ಇತರರು ಇದ್ದರು.