ಜಿಲ್ಲೆ

ವೀರ ಸೇನಾನಿಯ ಶಿಸ್ತು, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ: ಮೇಜರ್ ಡಾ.ಬಿ.ರಾಘವ

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೬ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ಮುಖ್ಯ ಅತಿಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಕಾರ್ಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಪ್ರತಿಮ ಸೇನಾ ದಂಡ ನಾಯಕರಾಗಿದ್ದಾರೆ. ಯಾವುದೇ ಜಾತಿ, ಧರ್ಮ ಮತ್ತು ಜನಾಂಗಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಶಿಸ್ತು, ಸಂಯಮ, ಧೈರ್ಯ, ದೇಶಭಕ್ತಿಯ ಮೂಲಕ ಸೇನಾಸೇವೆ ಸಲ್ಲಿಸಿ, ತಮ್ಮ ಆದರ್ಶಗಳಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಕಾರ್ಯಪ್ಪ ಅವರ ಪುತ್ರರಾದ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ವಾಯುದಳದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಎರಡನೇ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಕೈದಿ ಆಗಿದ್ದಾಗ ಪುತ್ರನಿಗೆ ವಿಶೇಷ ಸವಲತ್ತುಗಳನ್ನು ನಿರಾಕರಿಸಿದ ಫೀ.ಮಾ.ಕಾರ್ಯಪ್ಪ ಅವರು ಎಲ್ಲಾ ಸಾಮಾನ್ಯ ಸೈನಿಕರಂತೆ ನನ್ನ ಪುತ್ರ ಕೂಡ ಒಬ್ಬ ಎಂದು ಪಾಕಿಸ್ತಾನಕ್ಕೆ ತಿಳಿಸುವುದರ ಮೂಲಕ ಅಪ್ಪಟ ದೇಶಪ್ರೇಮವನ್ನು ಮೆರೆದಿದ್ದರು. ಇಂತಹ ವೀರ ಸೇನಾ ನಾಯಕನಿಗೆ ಗೌರವ ಸಲ್ಲಿಸುವುದು ಮತ್ತು ಸದಾ ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಯುವ ಜನತೆ ಫೀ.ಮಾ.ಕಾರ್ಯಪ್ಪ ಅವರ ಶಿಸ್ತು, ಕೌಶಲ್ಯ, ಧೈರ್ಯ, ದೇಶಪ್ರೇಮವನ್ನು ಮಾದರಿಯಾಗಿಟ್ಟುಕೊಂಡು ಗುರಿ ಸಾಧಿಸಬೇಕೆಂದು ಡಾ.ಬಿ.ರಾಘವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರೊ.ಶ್ರೀಧರ್ ಆರ್.ಹೆಗಡೆ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಬಾಲ್ಯ ಜೀವನ, ಶಿಕ್ಷಣ, ಸಾಧನೆ ಮತ್ತು ಅವರ ರಾಜಕೀಯ ಜೀವನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕೆ.ಬಸವರಾಜು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಡಾ.ಪಿ.ಪಿ.ಸವಿತ, ಮಡಿಕೇರಿ ಮಹಿಳಾ ಕಾಲೇಜಿನ ಎನ್.ಪಿ.ಸತೀಶ್, ಡಾ.ಎನ್.ಪಿ.ಕಾವೇರಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರೊ.ಗಾಯತ್ರಿದೇವಿ, ಕೆ.ಎಂ.ಪೂಣಚ್ಚ, ಡಾ.ಕೆ.ಶೈಲಶ್ರೀ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಕೊಡಗಿನ ವಿವಿಧ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಸೌಮ್ಯ ಸ್ವಾಗತಿಸಿ, ಕೆಡೆಟ್ ಹೆಚ್.ಆರ್.ಸಂದೇಶ್ ನಿರೂಪಿಸಿ, ಗ್ರಂಥಪಾಲಕಿ ಡಾ.ಸಿ.ವಿಜಯಲತ ವಂದಿಸಿದರು. ಎನ್‌ಸಿಸಿ ವಿದ್ಯಾರ್ಥಿ ನಾಯಕರಾದ ಎಸ್‌ಯುಒ ಗುಣಶೇಖರ್, ಜೆಯುಒ ಅಭಿ ಉತ್ತಯ್ಯ, ಜೆಯುಒ ಅರ್ಚನಾ ಹಾಗೂ ಉಪನ್ಯಾಸಕರಾದ ಕುರ್ಶಿದ ಬಾನು ಕಾರ್ಯಕ್ರಮ ಸಂಯೋಜಿಸಿದರು.