ಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಬೆಳವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಸಂಸ್ಕೃತಿಯ ಕೇಂದ್ರವನ್ನಾಗಿ ಮಾಡಿದೆ, ಇದಕ್ಕಾಗಿ ಪರಿಷತ್ ಸದಾ ಶ್ರಮಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ಇಲ್ಲಿಯ ಸ್ಟೇಷನ್ ರಸ್ತೆ ಈಶ್ವರ ದೇವಸ್ಥಾನ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಬ್ಬಳ್ಳಿ ನಗರ ತಾಲೂಕು ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸತ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ವೀಣಾ ಆಠವಲೆ ಅವರ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ವೀಣಾ ಅಠವಲೆ ಅವರು ತಮ್ಮ ಶಿಕ್ಷಕ ವೃತ್ತಿಯ ಜತೆಗೆ ರಂಗಭೂಮಿಯ ನಂಟನ್ನು ಬೆಳೆಸಿಕೊಂಡು ಕಳೆದ 30 ವರ್ಷಗಳಿಂದ ರಂಗಭೂಮಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ, ಬಾಜಿಲ್ ಡಿಸೋಜಾ, ವೀಣಾ ಅಠವಲೆ, ಬಸವರಾಜ ಚಕ್ರಸಾಲಿ, ದತ್ತಿ ದಾನಿ ವಿರೂಪಾಕ್ಷ ಕಟ್ಟಿಮನಿ, ಗುರುಸಿದ್ದಪ್ಪ ಬಡಿಗೇರ, ಇತರರು ಪಾಲ್ಗೊಂಡಿದ್ದರು.
ರಾಧಾಕೃಷ್ಣ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ಗಿರಿಜಾ ಚೆಕ್ಪಾಟ್, ಜಯಶ್ರೀ ಬೇವೂರ, ಸರೋಜಾ ಹೂಗಾರ ಪ್ರಾರ್ಥನೆ ಹಾಡಿದರು. ಅಶೋಕ ಸನ್ನಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ. ಗೋಗೇರಿ ಸ್ವಾಗತಿಸಿದರು. ಚನ್ನಬಸಪ್ಪ ಧಾರವಾಡ ಶೆಟ್ಟರ್ ವಂದಿಸಿದರು.