ಮಡಿಕೇರಿ:
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳ ಒಳ್ಳೆಯ ಕೆಲಸಗಳನ್ನು ಪಕ್ಷಭೇದ ಬಿಟ್ಟು ಅರಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೊಡಗು ಬಿಜೆಪಿ ನಾಯಕರಿಗೆ ವಿಧಾನ ಪರಿಷತ್ತು ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಸಲಹೆ ಮಾಡಿದರು.
ಹಾಲಿ ಶಾಸಕರು ಆಯ್ಕೆಯಾಗಿ ಕೇವಲ ೮ ತಿಂಗಳು ಮಾತ್ರ ಆಗಿದೆ. ಇಷ್ಟು ಅಲ್ಪಾವಧಿಯಲ್ಲಿ ಅವರು ಮಾಡಿರುವ ಕೆಲಸಗಳ ಬಗ್ಗೆ ಬಿಜೆಪಿಯವರು ಪ್ರಶ್ನೆ ಮಾಡುವುದಾದರೆ ಬಿಜೆಪಿಯವರು ೨೦ ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್‌ನವರು ಎಷ್ಟು ಬಾರಿ ಪ್ರಶ್ನೆ ಮಾಡಬಹುದು ಎಂದು ಪ್ರಶ್ನಿಸಿದರು. ಶಾಸಕ ಪೊನ್ನಣ್ಣ ಇಲ್ಲದ ಸಂದರ್ಭದಲ್ಲಿ ಅವರ ಗೃಹ ಕಚೇರಿಗೆ ಬಿಜೆಪಿ ನಾಯಕರು ಪಕ್ಷದ ಪ್ರಚಾರಕ್ಕೆ ತೆರಳುವ ರೀತಿಯಲ್ಲಿ ಹೋಗಿ, ಪೊನ್ನಣ್ಣ ಆಪ್ತ ಸಹಾಯಕನಿಗೆ ಅರ್ಜಿ ಕೊಟ್ಟು ಬಂದಿದ್ದಾರೆ. ಒದು ಕೇವಲ ಪ್ರಚಾರಕ್ಕಾಗಿ ನಡೆಸಿದ ಗಿಮಿಕ್. ಪೊನ್ನಣ್ಣ ಅವರಲ್ಲಿ ಪ್ರಶ್ನೆಗಳನ್ನು ಕೇಳಲೇಬೇಕು ಎಂದಿದ್ದರೆ ನೇರವಾಗಿ ಸಂಪರ್ಕಿಸಬಹುದಾಗಿತ್ತು. ಇಬ್ಬರು ಶಾಸಕರು ತಮ್ಮ ಅಭಿವೃದ್ಧಿ ಕೆಲಸಗಳ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿದ್ದಾರೆ. ಇವರನ್ನು ಪ್ರಶ್ನೆ ಮಾಡಬೇಕಾದರೆ ಆತ್ಮ ಗೌರವ ಇರಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಅವ್ಯವಸ್ತೆಯ ಆಗರವಾಗಿದ್ದ ಕೊಡಗನ್ನು ಈಗಿನ ಇಬ್ಬರು ಶಾಸಕರು ಸುವ್ಯವಸ್ಥೆಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಇವರಿಗೆ ಬೇಕಾದ ಎಲ್ಲಾ ಸಲಹೆ, ಸಹಕಾರಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಂದ ಸಿಗುತ್ತಿದೆ. ಇಂಥವರ ಕಾರ್ಯವೈಖರಿ ಪ್ರಶ್ನೆ ಮಾಡುತ್ತಾರೆ ಎಂದರೆ ಬಿಜೆಪಿಯವರು ಹತಾಶೆಗೆ ಒಳಗಾಗಿರಬೇಕು. ದೀರ್ಘ ಸಮಯದಿಂದ ಜಿಲ್ಲೆಯಲ್ಲಿ ಅಧಿಕಾರದಲ್ಲಿ ಇರದಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದ್ದರೂ ದ್ವೇಷದ ರಾಜಕೀಯ ಮಾಡುತ್ತಿಲ್ಲ.
ರಾಮಮಂದಿರ ಬಿಜೆಪಿ ಕೊಡುಗೆ ಅಲ್ಲ. ಭಾರತೀಯರ ಶ್ರಮದಿಂದ ಇದು ಆಗಿದೆ. ಆದರೆ ಇದನ್ನು ಬಿಜೆಪಿ ಬೇರೆ ರೀತಿಯಲ್ಲಿ ಬಿಂಬಿಸುತ್ತಿದೆ. ಸಂಸದ ಪ್ರತಾಪ್ ಸಿಂಹ ೧೦ ವರ್ಷದಿಂದ ಪ್ರತಿನಿಧಿಯಾಗಿ ಇದ್ದಾರೆ. ಆದರೆ ಕೊಡಗಿಗೆಗೆ ಏನೂ ಪ್ರಯೋಜನ ಆಗಿಲ್ಲ. ನಿರಾಶ್ರಿತರಿಗೆ ಪ್ಯಾಕೇಜ್ ಕೊಡಿಸಲಿಲ್ಲ. ಇಬ್ಬರು ಬಿಜೆಪಿ ಶಾಸಕರು ಸೋತ ನಂತರ ಪ್ರತಾಪ್ ಸಿಂಹ ಕೊಡಗಿಗೆ ಬರುತ್ತಿದ್ದಾರೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಕೊಲ್ಯದ ಗಿರೀಶ್, ಪ್ರಕಾಶ್ ಆಚಾರ್ಯ, ಫ್ಯಾನ್ಸಿ ಪಾರ್ವತಿ, ಸದಾ ಮುದ್ದಪ್ಪ ಇದ್ದರು.