ಶಿರಸಿ: ಯುವ ವೈದಿಕರು ಹೆಚ್ಚೆಚ್ಚು ವೈದಿಕ ಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಸ್ವರ್ಣವಲ್ಲೀಯಲ್ಲಿ ಸೋಮವಾರ ಆಯೋಜಿಸಿದ್ದ ವೈದಿಕ ಗೋಷ್ಠಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಂತಹ ಗೋಷ್ಠಿಯಲ್ಲಿ ಇನ್ನೂ ಹೆಚ್ಚು ವೈದಿಕರು ಭಾಗವಹಿಸುವಂತಾಗಬೇಕು. ಇದರಿಂದ ವೈದಿಕ ಕರ್ಮಗಳಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನಿಡುವುದು ತಪ್ಪುತ್ತದೆ. ಕರ್ಮಗಳನ್ನು ಶಾಸ್ತ್ರೀಯವಾಗಿ ನಡೆಸಲು ವೈದಿಕರು ಶಕ್ತರಾಗುತ್ತರೆ. ಸಮಾಜವು ಧರ್ಮ ಮಾರ್ಗದಿಂದ ವಿಮುಖ ಹೊಂದುತ್ತಿರುವದನ್ನು ತಪ್ಪಿಸಬಹುದು. ಒಳ್ಳೆಯ ಸಾಧನ. ಒಟ್ಟಿಗೆ ಸೇರಿ ನಿರಂತರವಾಗಿ ಚಿಂತನೆ ಮಾಡುವುದರ ಮೂಲಕ ಅನೇಕ ಗೊಂದಲಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದರು.
ಸ್ವರ್ಣವಲ್ಲೀ ಮಠದ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿಗಳು, ಮಹೇಶ್ ಭಟ್ ಇಡಗುಂದಿ, ಅನಂತಮೂರ್ತಿ ಭಟ್ಟ ಯಲುಗಾರ, ಮಂಜುನಾಥ ಭಟ್ಟ ಸಾಲಕಣಿ ಪಾಲ್ಗೊಂಡರು. ಡಾ. ಕೃಷ್ಣ ಜೋಶಿ ಮೂಲೇಮನೆ ನಿರ್ವಹಿಸಿದರು.