ಜಿಲ್ಲೆ

ಕರೊನಾ ನಿರ್ವಹಣೆಗೆ ರಾಜ್ಯ ಸರ್ಕಾರ ನಿರ್ಲಕ್ಷೃ - ಶಾಸಕ ವೇದವ್ಯಾಸ ಕಾಮತ್

Mangaluru - Hariprasad Rai


ಮಂಗಳೂರು : ರಾಜ್ಯದಲ್ಲಿ ಕರೊನಾ ಪ್ರಕರಣ ಏರುಗತಿಯಲ್ಲಿದ್ದು ಇದರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಲಕ್ಷೃ ವಹಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದ.ಕ. ಜಿಲ್ಲೆಯಲ್ಲಿಯೂ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು,
ವ್ಯಕ್ತಿಯೋರ್ವರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣ ಮೀರುವ ಮುನ್ನ ಜಿಲ್ಲಾಡಳಿತ ಎಚ್ಚರ ವಹಿಸಬೇಕು. ಕರೊನಾ ಆರಂಭಿಕ ಕಾಲದಲ್ಲಿ ಅಂದಿನ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆದಿದ್ದ ಕಾಂಗ್ರೆಸ್ ಈಗ
ಮೂರು ಜೀವಹಾನಿಯಾದರೂ ಕರೊನಾ ಪ್ರಕರಣ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಕೋವಿಡ್ ಸಹಿತ ಜಿಲ್ಲಾಡಳಿತ ನಡೆಸುವ ಸಭೆಗಳಿಗೆ ನಮಗೆ ಆಮಂತ್ರಣ ನೀಡುತ್ತಿಲ್ಲ. ಶುಕ್ರವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರೂ ಸಭೆಗೂ ನಮ್ಮನ್ನು ಕರೆದಿಲ್ಲ. ಕೋವಿಡ್ ಬಗ್ಗೆ ಜಿಲ್ಲಾಡಳಿತ ಸಭೆ ನಡೆಸಿದೆಯೇ ಇಲ್ಲವೇ ಎಂಬ ಬಗ್ಗೆ ನಮಗೆ ಯಾವುದೇ
ಮಾಹಿತಿ ಇಲ್ಲ ಎಂದು ಶಾಸಕ ಕಾಮತ್ ಹೇಳಿದರು.
* ಅಭಿವೃದ್ದಿಗೆ ಹಿನ್ನಡೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಮಂಗಳೂರು ನಗರಕ್ಕೆ ಯಾವುದೇ ಇಲಾಖೆಯಿಂದ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಗೆ ಕಾರಣವಾಗಿದೆ.ಮಂಗಳೂರು ಮಹಾನಗರ ಪಾಲಿಕೆಯ 125 ಕೋಟಿ ರೂ.ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿ, ಮಂಗಳೂರು ಮಹಾನಗರ ಪಾಲಿಕೆಯ 20 ಕೋಟಿ ರೂ.
ಮಳೆ ಹಾನಿಯ ವಿಶೇಷ ಅನುದಾನ ಕಾಮಗಾರಿ ಸ್ಥಗಿತಗೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲೇ ಪಾಲಿಕೆಗೆ ಸುಮಾರು 175 ಕೋಟಿ ರೂ. ಮಂಜೂರಾಗಿದ್ದು, ಇದೀಗ ಅನುದಾನ ಬಿಡುಗಡೆಯಾಗದೇ ಕಾಮಗಾರಿ ಅರ್ಧಕ್ಕೆ ನಿಂತಿದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಂಗಳೂರಿನಲ್ಲಿ ಇತ್ತೀಚೆಗೆ ಮಂಗಳೂರಿಗೆ 25 ಕೋಟಿ ರೂ.ಕೊಡುತ್ತೇವೆ ಎಂದು ಘೋಷಿಸಿದ್ದರು. ಆದರೆ ಇದುವರೆಗೆ ಯಾವುದೇ ಅನುದಾನವೂ ಬಂದಿಲ್ಲ ಎಂದು ಶಾಸಕ ಕಾಮತ್ ಹೇಳಿದರು.
* ಗೊಂದಲ ಸೃಷ್ಟಿ
ನಗರದಲ್ಲಿ 200 ಕೋಟಿ ರೂ.ಒಳಚರಂಡಿ ಕಾಮಗಾರಿಗಳು ಅನುದಾನವಿಲ್ಲದೇ ಕಾರ್ಯ ಪ್ರಗತಿಯಾಗುತ್ತಿಲ್ಲ. ಸ್ಮಾರ್ಟ್ ಸಿಟಿಯ ರಿವರ್ ್ರಂಟ್ ಯೋಜನೆಗೆ ಸಂಬಂಧಿಸಿದಂತೆ ಹಿಂದೆ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಬಂದರು ಇಲಾಖೆಯ ದೊಡ್ಡ ದೊಡ್ಡ ಜಾಗಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆದುಕೊಂಡಿದ್ದ ಕೆಲವು ಲೀಸ್‌ಗೆ ಪಡೆದವರು ಇದೀಗ ಆ ಜಾಗವನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಸ್ಮಾರ್ಟ್ ಸಿಟಿಯ ಕಾಮಗಾರಿ ವೇಳೆ ಅರಣ್ಯ ಇಲಾಖೆ ಮೂಲಕ, ಸಿಆರ್‌ಝಡ್ ಅಧಿಕಾರಿಗಳ ಮೂಲಕ ಗೊಂದಲವನ್ನು ಸೃಷ್ಟಿಸಿ ಕಾಮಗಾರಿಯ ವೇಗವನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇರುವುದು ಸ್ಪಷ್ಟ ಎಂದು ಅವರು ಹೇಳಿದರು.
* ಮಾಜಿ ಶಾಸಕರ ಅಸಹಾಯಕತೆ :
ನಗರದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಸ್ಥಳಾಂತರ ಹಾಗೂ ಸ್ಟೇಟ್‌ಬ್ಯಾಂಕ್ ಪರಿಸರದ ವ್ಯಾಪಾರಸ್ಥರ ಸಮಸ್ಯೆ ಬಗ್ಗೆ ಆಡಳಿತ ಪಕ್ಷದ ಮಾಜಿ ಶಾಸಕರೇ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಪುರಭವನದಲ್ಲಿ ನಡೆದ ಮೇಯರ್‌ರ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿ ಅವರ ಪಕ್ಷದ ಆಡಳಿತ ನೇಮಿಸಿದ ಪಾಲಿಕೆ ಆಯುಕ್ತರ ನಡವಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅವರದೇ ಸರ್ಕಾರದ ಆಡಳಿತ ವಿರುದ್ಧ ಅವರೇ ಅಸಹಾಯಕರಾದರೆ, ಇನ್ನು ಜನಸಾಮಾನ್ಯರ ಪಾಡು ಏನು ಎಂದು ಕಾಮತ್ ಪ್ರಶ್ನಿಸಿದರು.
*ದ್ವೇಷ ರಾಜಕೀಯ ನಿಲ್ಲಿಸಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ನಂತರದಲ್ಲಿ ಕರಾವಳಿಯ ಹಿಂದೂ ಕಾರ್ಯಕರ್ತರ ಮೇಲೆ ಏಕಪಕ್ಷೀಯವಾಗಿ ಗಡಿಪಾರು ಅಸ ಪ್ರಯೋಗಿಸುತ್ತಲೇ ಇದೆ. ತಿಂಗಳ ಹಿಂದೆಯಷ್ಟೇ ಐದು ಜನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದ್ದ ಜಿಲ್ಲೆಯ ಪೊಲೀಸರು, ಇದೀಗ ಮತ್ತೆ ಇಬ್ಬರು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹಿಂದೂಗಳ ಮೇಲಿನ ದ್ವೇಷ ರಾಜಕಾರಣವನ್ನು ತಕ್ಷಣ ನಿಲ್ಲಿಸಬೇಕು . ಇಲ್ಲವಾದರೆ ಹಿಂದೂ ಸಮಾಜದೊಂದಿಗೆ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ವೇದವ್ಯಾಸ ಕಾಮತ್ ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ರವಿಶಂಕರ ಮಿಜಾರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ. ಬಂಗೇರ, ಸುರೇಂದ್ರ ಜೆ. ಉಪಸ್ಥಿತರಿದ್ದರು.
..............................