ಹುಬ್ಬಳ್ಳಿ: ವೇದವ್ಯಾಸ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ 35ನೇ ವಾರ್ಷಿಕ ಮಹಾಸಭೆಯು ಇಲ್ಲಿಯ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಂಕರ ಪಾಟೀಲ ಮಾತನಾಡಿ, ಸಂಘವು 2023-24ನೇ ಸಾಲಿಗೆ 23.46 ಲಕ್ಷ ರೂ. ನಿವ್ವಳ ಲಾಭ ಹೊಂದಿದೆ. 31.03.2024ಕ್ಕೆ 2521 ಸದಸ್ಯರನ್ನು ಹೊಂದಿದ್ದು, 1.21 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಸದಸ್ಯರಿಗೆ ಶೇ. 11 ಡಿವ್ಹಿಡೆಂಡ್ ಘೋಷಣೆ ಮಾಡಲಾಗಿದೆ ಎಂದರು.
ಆಡಳಿತ ಮಂಡಳಿ ವತಿಯಿಂದ ಉತ್ತಮ ಹಣಕಾಸಿನ ವ್ಯವಹಾರ ಕೈಗೊಂಡ ಸದಸ್ಯರಿಗೆ ಸನ್ಮಾನಿಸಲಾಯಿತು ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ನಿರ್ದೇಶಕ ಸುಧೀರ ಇಂಗಳಗಿ, ಮಂಜುಳಾ ಕುಲಕರ್ಣಿ ಸಂಘದ ವಹಿವಾಟಿನ ವಿವರ ನೀಡಿದರು. ಕಳೆದ ವರ್ಷದ ವಾರ್ಷಿಕ ವರದಿಯನ್ನು ಸಂಘದ ಮ್ಯಾನೇಜರ್ ಆನಂದ ಸೊರಟೂರ ವಾಚನ ಮಾಡಿದರು.
2024-25ನೇ ಸಾಲಿನ ಅಂದಾಜು ಪತ್ರಿಕೆಯನ್ನು ನಿರ್ದೇಶಕ ಧೀರೇಂದ್ರ ಪಾಟೀಲ ವಾಚನ ಮಾಡಿದರು. ಯೋಜನೆಗಳ ಮಾಹಿತಿಯನ್ನು ಸಂದ ನಿರ್ದೇಶಕ ಸಂಜೀವ ಕುಲಕರ್ಣಿ ನೀಡಿದರು.
ಸಂಘದ ಉಪನಿರ್ದೇಶಕ ನಾರಾಯಣ ನಿಡಗುಂದಿ, ನಿರ್ದೇಶಕ ವೆಂಕಟೇಶ ಭಾವಿಕಟ್ಟಿ, ನರಸಿಂಹ ಕೊತವಾಲ ಉಪಸ್ಥಿತರಿದ್ದರು.
ಭಾರ್ಗವಿ ಭಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಪೂರ್ಣಿಮಾ ದುಶಿ ವಂದಿಸಿದರು.