ಜಿಲ್ಲೆ

ಕಟ್ಟಿಗೆ ಮುಹೂರ್ತ ನೆರವೇರಿಸಿದ ವೇದವರ್ಧನ ಶ್ರೀ...

ಉಡುಪಿ ಪರ್ಯಾಯಕ್ಕೆ ಶಿರೂರು ಮಠ ಸಜ್ಜು

ಗೌರವಾಧ್ಯಕ್ಷರಾಗಿ ಡಾ. ಡಿ.ವೀರೇಂದ್ರ ಹೆಗ್ಡೆ ನೇಮಕ

ವಿಜಯವಾಣಿ ಸುದ್ದಿಜಾಲ ಉಡುಪಿ

ಅಷ್ಟ ಮಠಗಳಲ್ಲಿ ಒಂದಾದ ಶ್ರೀ ವಾಮನ ತೀರ್ಥ ಪರಂಪರೆಯ ಶಿರೂರು ಮಠವು ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಸಿದ್ಧತೆ ನಡೆಸಿದ್ದು, ಪ್ರಥಮ ಪರ್ಯಾಯ ಸೇವೆ ಕೈಗೊಳ್ಳಲಿರುವ ವೇದವರ್ಧನ ತೀರ್ಥ ಶ್ರೀಪಾದರು ಮಾಧ್ವ ಸರೋವರದ ಬಳಿ ಜುಲೈ 13ರಂದು ಬೆಳಗ್ಗೆ ಕಟ್ಟಿಗೆ ಮುಹೂರ್ತದ ಸಂಪ್ರದಾಯ ನೆರವೇರಿಸಿದರು.

ಪ್ರಸ್ತುತ ಪರ್ಯಾಯ ಶ್ರೀಗಳಾದ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ, ಕಿರಿಯ ಯತಿ ಸುಶ್ರೀಂದ್ರ ಶ್ರೀ, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಶಿರೂರು ಶ್ರೀಗಳು ಕಟ್ಟಿಗೆ ರಥದ ನಿರ್ಮಾಣಕ್ಕೆ ಸಿಂಹ ಲಗ್ನ ಮುಹೂರ್ತದಲ್ಲಿ ಕಟ್ಟಿಗೆ ಜೋಡಿಸಿದರು.

ದೇವತಾ ಪ್ರಾರ್ಥನೆ

ಬೆಳಗ್ಗೆ 8 ಗಂಟೆ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ನೇತೃತ್ವದಲ್ಲಿ ಪುರೋಹಿತ ಗಿರಿರಾಜ ಉಪಾಧ್ಯಾಯ ಅವರೊಂದಿಗೆ ಶಿರೂರು ಶ್ರೀಗಳು ದೇವತಾ ಪ್ರಾರ್ಥನೆಯೊಂದಿಗೆ ಕಟ್ಟಿಗೆ ಮುಹೂರ್ತ ಸಂಪ್ರದಾಯ ಆಚರಿಸಿದರು. ಮಠದ ಶ್ರೀವಿಠ್ಠಲ ದೇವರು, ರಥಬೀದಿಯಲ್ಲಿರುವ ಚಂದ್ರೇಶ್ವರ, ಅನಂತೇಶ್ವರ ದೇಗುಲದಲ್ಲಿ ಹಾಗೂ ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣರ ದರ್ಶನ ಪಡೆದು, ಬೆಳಗ್ಗೆ 9:15ಕ್ಕೆ ಮುಹೂರ್ತ ನೆರವೇರಿಸಿದರು.

ಕಟ್ಟಿಗೆ ಮೆರವಣಿಗೆ

ಮುಹೂರ್ತಕ್ಕೂ ಮೊದಲು ಮಠದ ಕಲ್ಸಂಕ ಬಳಿ ಇರುವ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಎತ್ತಿನಗಾಡಿ ಹಾಗೂ ಕೈಗಾಡಿಯಲ್ಲಿ ಮತ್ತು ಭಕ್ತರು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆಯಲ್ಲಿ ತಂದರು. ಎಲ್ಲ ಕಟ್ಟಿಗೆಯನ್ನು ಮಧ್ವ ಸರೋವರದ ಈಶಾನ್ಯ ಭಾಗದ ನಿಗದಿತ ಸ್ಥಳದಲ್ಲಿ ಪೂಜೆ-ಪ್ರಾರ್ಥನೆಗೈದು ಕಟ್ಟಿಗೆ ರಥ ನಿಮಾರ್ಣಕ್ಕೆ ಚಾಲನೆ ನೀಡಲಾಯಿತು.

ಶಾಸಕರಾದ ಯಶಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್​, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಠದ ಪಾರುಪತ್ತೆಗಾರ ಶ್ರೀಶ ಭಟ್​ ಕಡೆಕಾರ್​, ಗೋಪಾಕೃಷ್ಣ ಅಸ್ರಣ್ಣ, ಜಯಕರ ಶೆಟ್ಟಿ ಇಂದ್ರಾಳಿ, ಪ್ರಸಾದರಾಜ್​ ಕಾಂಚನ್​, ರಮೇಶ ಕಾಂಚನ್​, ಕಟೀಲು ಸೂರ್ಯನಾರಾಯಣ ಉಪಾಧ್ಯಾಯ, ಸತ್ಯನಾರಾಯಣ ಆಚಾರ್ಯ, ಕೊಲ್ಲೂರು ದೇವಳದ ಟ್ರಸ್ಟಿ ಅಭಿಲಾಶ್​ ಸೇರಿಂದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

ದೇವರ ಸೇವೆಗೆ ಸದವಕಾಶ

ಕಟ್ಟಿಗೆ ಮುಹೂರ್ತದ ಬಳಿಕ ಶಿರೂರು ಮಠದಲ್ಲಿ ನಡೆದ ಸಭೆಯಲ್ಲಿ ವೇದವರ್ಧನ ಶ್ರೀ ಮಾತನಾಡಿ, ಪೀಠಾಧಿಪತಿಯಾಗಿ ನಮಗಿದು ಪ್ರಥಮ ಪರ್ಯಾಯವಾಗಿದೆ. ಸರ್ವಜ್ಞ ಪೀಠಾರೋಹಣದ ಹಾಗೂ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿಯಾಗಿ ಭಕ್ತರೊಂದಿಗೆ ಸೇರಿ ಕಟ್ಟಿಗೆ ಮುಹೂರ್ತ ಯಶಸ್ವಿಯಾಗಿ ನೆರವೇರಿಸಲಾಗಿದೆ. ಮುಂದೆ ಧಾನ್ಯ ಮುಹೂರ್ತದ ಬಳಿಕ ಕಟ್ಟಿಗೆಯ ರಥಕ್ಕೆ ಕಲಶ ಇಡಲಾಗುತ್ತದೆ. ಇದು ಪರ್ಯಾಯ ಕೈಗೊಳ್ಳುವಾಗಿನ ಆಚರಣೆ. ಈ ಕಟ್ಟಿಗೆ ಬಳಸಿ ದೇವರಿಗೆ ಅನ್ನ ಹಾಗೂ ನೈವೇದ್ಯ ಪ್ರಸಾದ ತಯಾರಿಸಲಾಗುತ್ತದೆ. ಆ ಪ್ರಸಾದ ಸೇವಿಸಲು ಭಕ್ತರೆಲ್ಲ ಬರಬೇಕು. ಇದು ದೇವರ ಸೇವೆಗೆ ಲಭಿಸುವ ಮಹದವಕಾಶವಾಗಿದೆ ಎಂದರು.

ಸ್ವಾಗತ ಸಮಿತಿ ರಚನೆ, ಕಚೇರಿ ಉದ್ಘಾಟನೆ

ಶಿರೂರು ಮಠದಲ್ಲಿ ವೇದವರ್ಧನ ಶ್ರೀಗಳು ಭಾವಿ ಪರ್ಯಾಯದ ಸ್ವಾಗತ ಸಮಿತಿಯ ಕಚೇರಿ ಉದ್ಘಾಟಿಸಿದರು. ಸ್ವಾಗತ ಸಮಿತಿಯನ್ನೂ ರಚಿಸಲಾಗಿದ್ದು, ಸಮಿತಿಯ ಗೌರವ ಅಧ್ಯಕ್ಷರಾಗಿ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಡೆ, ಅಧ್ಯಕ್ಷರಾಗಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾರ್ಯಾಧ್ಯಕ್ಷರಾಗಿ ಕಟೀಲು ದೇವಳದ ಅರ್ಚಕ ಗೋಪಾಕೃಷ್ಣ ಅಸ್ರಣ್ಣ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಮಣಿಪಾಲದ ಉದ್ಯಮಿ ರಂಜನ್​ ಪೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿಯಾಗಿ ಜಯಪ್ರಕಾಶ ಕೆದ್ಲಾಯ ಅವರನ್ನು ನೇಮಕ ಮಾಡಲಾಯಿತು.

ದೇವರಿಗೆ ನೈವೇದ್ಯ ತಯಾರಿಕೆಗಾಗಿ ಕಟ್ಟಿಗೆ ಸಂಗ್ರಹಿಸುವ ಭಕ್ತಿ ಅಭಿಯಾನ ಇದಾಗಿದೆ. ಡಿ.19ರಂದು ಧಾನ್ಯ ಮುಹೂರ್ತದ ಬಳಿಕ ಕಟ್ಟಿಗೆ ರಥಕ್ಕೆ ಕಲಶ ಸಮರ್ಪಣೆ ಹಾಗೂ ಚಪ್ಪರ ಮುಹೂರ್ತ ನಡೆಯಲಿದೆ. ಜ.9ರಂದು ಶ್ರೀಗಳ ಪುರಪ್ರವೇಶ, ಜ.18ರಂದು ಬೆಳಗ್ಗೆ 5:45ಕ್ಕೆ ಪರ್ಯಾಯ ಸೇವೆ ಹಾಗೂ ಸರ್ವಜ್ಞ ಪೀಠಾರೋಹಣ ನಡೆಯಲಿದೆ. | ಡಾ. ಉದಯಕುಮಾರ ಸರಳತ್ತಾಯ. ಶಿರೂರು ಮಠದ ದಿವಾನ