ಜಿಲ್ಲೆ

ಸಾಧಕರಿಗೆ ಸನ್ಮಾನಿಸುವುದು ಮಠಗಳ ಕರ್ತವ್ಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸಾಧಕರು ಹಾಗೂ ಅಧ್ಯಯನಶೀಲರನ್ನು ಗೌರವಿಸುವುದು ಮಠ-ಮಾನ್ಯಗಳ ಕರ್ತವ್ಯ. ಸನಾತನ ಭಾರತೀಯ ಪರಂಪರೆ ಉಳಿದು ವಿಶ್ವಕ್ಕೆ ಬೆಳಕು ನೀಡಬೇಕು. ಆ ನಿಟ್ಟಿನಲ್ಲಿ ಸಮಾಜವೂ ನಮಗೆ ಸ್ಪಂದಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಬೆಳಗಾವಿಯ ವೇಣುಗೋಪಾಲ ಸಭಾಂಗಣದಲ್ಲಿ ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾದ 82ನೇ ಅಧಿವೇಶನ, ವೇದವ್ಯಾಸ ಜಯಂತಿ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 25ನೇ ಆರಾಧನೋತ್ಸವ ನಿಮಿತ್ತ ಭಾನುವಾರ ಗಣ್ಯರಿಗೆ ಹಮ್ಮಿಕೊಂಡಿದ್ದ ಗೌರವಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಮಾತನಾಡಿ, ವೇದ-ಶಾಸ್ತ್ರಾಧ್ಯಯನ ಮಾಡುವ ಪಂಡಿತರು, ವಿದ್ವಾಂಸರು ಹಾಗೂ ಯುವ ಪ್ರತಿಭೆಗಳಿಗೆ ಪ್ರತಿವರ್ಷವೂ ವೇದವ್ಯಾಸ ಜಯಂತಿ ನಿಮಿತ್ತ ಗೌರವಿಸುವ ಪರಿಪಾಠಕ್ಕೆ ವಿದ್ಯಾಮಾನ್ಯತೀರ್ಥರು 81 ವರ್ಷಗಳ ಹಿಂದೆಯೇ ಚಾಲನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಅಧಿವೇಶನದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಹಿರಿಯ ಪ್ರವಚನಕಾರ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಪಂಡಿತರಾದ ಗುರುರಾಜಾಚಾರ್ಯ ಜೋಶಿ, ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ, ವಿದುಷಿ ಶುಭಾ ಸಂತೋಷ, ಪಂಡಿತ ಬದರೀನಾಥಾಚಾರ್ಯ, ಶ್ರೀನಿಧಿ ವಾಸಿಷ್ಠ, ರಮೇಶ ಇತರರು ಸಾಕ್ಷಿಯಾದರು.

ವೇದವ್ಯಾಸರ ಗ್ರಂಥಗಳಿಗೆ ನಾಣ್ಯ ತುಲಾಭಾರ ಮಾಡಿದ ವಿದ್ಯೇಶತೀರ್ಥ ಸ್ವಾಮೀಜಿ, ಭಕ್ತರಿಗೆ ಫಲ ಮಂತ್ರಾಕ್ಷತೆ ಸಹಿತ ನಾಣ್ಯಗಳನ್ನೂ ನೀಡಿದರು. ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ನರಸಿಂಹ ಜಯಂತಿ ಮತ್ತು ವೇದವ್ಯಾಸರ ಜಯಂತಿ ಬಗ್ಗೆ ಪ್ರವಚನ ನೀಡಿದರು.

ಪ್ರಶಸ್ತಿ, ನಗದು ನೀಡಿ ಸನ್ಮಾನ ಇದೇ ವೇಳೆ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಉಡುಪಿ ಭಂಡಾರಕೇರಿ ಮಠದ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆ ನಿರ್ದೇಶಕ ಡಾ. ಡಿ.ಪಿ. ಮಧುಸೂದನಾಚಾರ್ಯ ಅವರು ಮಠದ ಪ್ರತಿಷ್ಠಿತ ವೇದಪೀಠ ಪ್ರಶಸ್ತಿ (1 ಲಕ್ಷ ರೂ. ನಗದು) ಸ್ವೀಕರಿಸಿದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ಪ್ರಾಧ್ಯಾಪಕ ವೆಂಕಟೇಶ ಬಾಯರಿ ಅವರಿಗೆ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ, ಬೆಳಗಾವಿಯ ವಿಶ್ವ ಮಧ್ವ ಮಹಾಪರಿಷತ್ ಸಂಚಾಲಕ ಪಂಡಿತ ಕಟ್ಟಿ ಪ್ರಮೋದಾಚಾರ್ಯಗೆ ರಾಜವಿದ್ಯಾಮಾನ್ಯ ಪ್ರಶಸ್ತಿ ಮತ್ತು ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಯುವ ವಿದ್ವಾಂಸ ಶಶಿಧರ ಆಚಾರ್ಯರಿಗೆ ರಾಜಹಂಸ ಪ್ರಶಸ್ತಿ (ತಲಾ 50 ಸಾವಿರ ರೂ. ನಗದು, ಸ್ಮರಣಿಕೆ) ನೀಡಲಾಯಿತು.