ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನೆಹರು ಯುವ ಕೇಂದ್ರ, ಮಹಾವೀರ ಮಣಿಕಂಠ ಯುವಕ ಸಂಘ ಹಾಗೂ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಬಿ.ಈಡಿ. ಪ್ರಶಿಕ್ಷಣಾರ್ಥಿಗಳಿಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಗಂಗೂಬಾಯಿ ಪವಾರ ರವರು ಕ್ರೀಡಾಕೂಟವನ್ನು ಉದ್ಘಾಟಿಸಿ ನಮ್ಮ ಮನಸ್ಸು ಸದೃಢವಾಗಬೇಕಾದರೆ ದೈಹಿಕವಾಗಿ ಸದೃಢವಾದಾಗ ಮಾತ್ರ ಸಾಧ್ಯ, ದೈಹಿಕ ಕ್ರೀಡೆಗಳನ್ನು ಆಡುವುದರಿಂದ ಮನಸ್ಸು ಮತ್ತು ದೇಹವನ್ನು ಗಟ್ಟಿಯಾಗಿಸಿಕೊಳ್ಳಬಹುದು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು. ಎಷ್ಟೇ ಶ್ರೀಮಂತರಿದ್ದರು ಆರೋಗ್ಯದ ಮುಂದೆ ಎಲ್ಲವೂ ಶೂನ್ಯ. ದಿನಾಲು ಬೆಳಗ್ಗೆ ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಬಂಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ಪ್ರಶಿಕ್ಷಣಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊಂದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಮಾತ್ರ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ರಮೇಶ್ ಲಮಾಣಿ ರವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಸಮಿತಿಯ ಮೈದಾನದಲ್ಲಿ ಬಾಲಕ /ಬಾಲಕಿಯರಿಗೆ ಪ್ರತ್ಯೇಕವಾಗಿ ವಾಲಿಬಾಲ್, ಕಬಡ್ಡಿ, 100 ಮೀಟರ್ ಓಟ, 200 ಮೀಟರ್ ಓಟ, ರೀಲೆ ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಕಾಲೇಜಿನ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಮಸ್ತ ಉಪನ್ಯಾಸಕ ಬಳಗದವರು, ಸಿಬ್ಬಂದಿ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು