ಮಂಡ್ಯ: ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡುತ್ತಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಏ.26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ. ಅಂದು ಎರಡು ಕೋಟಿ ಈಡುಗಾಯಿ ಒಡೆಯುವ ಪ್ರಯತ್ನ ನಡೆಯಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರಂತರ ಒತ್ತಾಯ ಮಾಡುತ್ತಿದ್ದರೂ ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನ ಆಗಿಲ್ಲ. ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಲಾಗಿದೆ. ಆದಾಗ್ಯೂ ಅಂದಿನಿಂದ ಎಲ್ಲ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಎಂಇಎಸ್ ರಾಜ್ಯದ ಗಡಿನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇಂದಿಗೂ ಅದನ್ನು ಯಾವುದೇ ರಾಜ್ಯ ಸರ್ಕಾರ ಈಡೇರಿಸಿಲ್ಲ. ಕಳಸಬಂಡೂರಿ, ಮೇಕೆದಾಟು ಯೋಜನೆ ಜಾರಿಯಾಗಿಲ್ಲ. ರಾಜ್ಯದಲ್ಲಿ ಪರಭಾಷಿಕರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಕರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು. ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಪೂರಕವಾದ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಿಲ್ಲ. ಐಟಿಬಿಟಿ ಮಸೂದೆ ಅನುಷ್ಠಾನಗೊಂಡಿಲ್ಲ. ಈ ಬಗ್ಗೆಯೂ ರಾಜ್ಯಸರ್ಕಾರ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಮಾ.22ರಂದು ಬಂದ್ ಕರೆ ಕೊಟ್ಟಿದ್ದೆವು. ಮಂಡ್ಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಮಂಡ್ಯ ಜನಕ್ಕೆ ಧನ್ಯವಾದ ಹೇಳುತ್ತೇನೆ. ಇದೇ ಏ.26ಕ್ಕೆ ರಾಜ್ಯದ ಉದ್ದಗಲಕ್ಕೂ ಈಡುಗಾಯಿ ಒಡೆಯುವ ಚಳವಳಿ ಮೂಲಕ ವಿಶೇಷ, ವಿನೂತನವಾಗಿ ಮತ್ತೊಂದು ಹೋರಾಟ ಮಾಡಲಾಗುತ್ತಿದೆ. ಎಂಇಎಸ್ ನಿಷೇಧ, ಉತ್ತರ ಕರ್ನಾಟಕ ಅಭಿವೃದ್ಧಿ, ಪರಭಾಷಿಕರ ದಬ್ಬಾಳಿಕೆ, ಪರಭಾಷಿಕರ ಚಿತ್ರಗಳ ಬಹಿಷ್ಕಾರ, ಕೇಂದ್ರದ ಮಲತಾಯಿ ಧೋರಣೆ, ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ ಕನಿಷ್ಟ ಎರಡು ಕೋಟಿ ಈಡುಗಾಯಿ ಒಡೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇಂದಿನವರೆಗೂ ಜಾತಿ ಬಗ್ಗೆ ಮಾತನಾಡಿಲ್ಲ. ಅದನ್ನ ಏಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ರಾಜ್ಯ ಉದಯವಾಗಿದ್ದು ಭಾಷೆ ಮೇಲೆ. ಕುವೆಂಪು ಅವರು ಮೈಸೂರಿನಲ್ಲಿ ಸಮಗ್ರ ಕರ್ನಾಟಕ ಆಗಬೇಕು ಎಂದಿದ್ದರು. ಆದರೆ ಇವತ್ತು ಜಾತಿಯ ಕರ್ನಾಟಕ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ, ಕನಕದಾಸರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಮಾತ್ರವಲ್ಲ, ಇಂದು ಎಲ್ಲ ಪಕ್ಷಗಳು ಜಾತಿ ಹಿಂದೆ ಬಿದ್ದಿವೆ. ಸಿದ್ದರಾಮಯ್ಯ ಅವರೇ ಕರ್ನಾಟಕದ ಕೊನೆಯ ಕೊಂಡಿ. ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ. ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಶಾಸನ ಸಭೆಯಲ್ಲಿ ಈ ವಿಷಯ ಚರ್ಚೆ ಬೇಕೆ?. ಶಾಸನಸಭೆಯ ಗಂಭೀರತೆ ಏನಾಗಬೇಕು?. ವಿಧಾನಸಭೆ, ವಿಧಾನ ಪರಿಷತ್‌ನ ಘನತೆ, ಗಾಂಭೀರ್ಯ ಕುಸಿಯುತ್ತಿದೆ. ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನ ಪರಿಷತ್ ವ್ಯಾಪಾರೀಕರಣ ಆಗುತ್ತಿದೆ. ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅದನ್ನೂ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಡಿ.ಮಂಜುನಾಥ್, ಪಾರ್ಥ ಸಾರಥಿ, ಮಂಜುನಾಥ್ ಬೆಟ್ಟಹಳ್ಳಿ ಇತರರಿದ್ದರು.