ಜಿಲ್ಲೆ

ಹೆಬ್ಬಳ್ಳಿಯಲ್ಲಿ ವಾಸುದೇವ ಶ್ರೀಗಳ ರಥೋತ್ಸವ

ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಶಿವಾನಂದ ಮಠದ ಲಿಂ.ವಾಸುದೇವ ಸ್ವಾಮೀಜಿ ಹಾಗೂ ಬಸವರಾಜ ಸ್ವಾಮೀಜಿ ಪುಣ್ಯಾರಾಧನೆ ಪ್ರಯುಕ್ತ ಗುರುವಾರ ವಾಸುದೇವ ಶ್ರೀ ಮೂರ್ತಿಯ ಭವ್ಯ ರಥೋತ್ಸವ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಅರ್ಚಕರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5ಗಂಟೆಗೆ ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಶ್ರೀ ಬ್ರಹ್ಮಾನಂದ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ವಾಧ್ಯ ಮೇಳದೊಂದಿಗೆ ರಥೋತ್ಸವ ಮಠದಿಂದ ಆರಂಭವಾಯಿತು. ಚಂಗಲಾ ಪರಮೇಶ್ವರಿ ದೇವಸ್ಥಾನದವರೆಗೆ ರಥ ಸಾಗಿ, ಮರಳಿ ಶಿವಾನಂದ ಮಠ ತಲುಪಿತು. ಭಕ್ತರು ತೇರಿಗೆ ಉತ್ತತ್ತಿ, ನಿಂಬೆ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಗ್ರಾಪಂ ಅಧ್ಯಕ್ಷ ಮಂಜುನಾಥ ಭೀಮಕ್ಕನವರ, ಉಪಾಧ್ಯಕ್ಷೆ ಸುಶೀಲವ್ವ ಸಾಲಿ, ಬಸವರಾಜ ತಟ್ಟಿಮನಿ, ಚನ್ನಮಲ್ಲಿಕಾರ್ಜುನ ಹೂಗಾರ, ಸಹದೇವ ಹಾವೇರಿ, ಮಂಜುನಾಥ ಕುರುಡಿಕೇರಿ, ಸುಮಂಗಲಾ ಕೌದೆನ್ನವರ, ಶಿವಾನಂದ ಹೂಗಾರ, ಸುರೇಶ ಬನ್ನಿಗಿಡದ ಸೇರಿದಂತೆ, ಶಿವಳ್ಳಿ, ತಲವಾಯಿ, ಚಂದನಮಟ್ಟಿ, ಕನಕೂರ, ಅಮ್ಮಿನಬಾವಿ, ಕವಲಗೇರಿ ಹಾಗೂ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.