ಜಿಲ್ಲೆ

ಬ್ರಾಹ್ಮಣ್ಯದ ರಕ್ಷಣೆಗೆ ಬ್ರಾಹ್ಮಣರು ಒಗ್ಗಟ್ಟಾಗಲಿ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ

ಬಾಳೆಕುದ್ರು ಶ್ರೀಗಳಿಗೆ ಸ್ವಾಗತ, ಶ್ರೀಕೃಷ್ಣ ದರ್ಶನ

ವಿಜಯವಾಣಿ ಸುದ್ದಿಜಾಲ ಉಡುಪಿ

ಬ್ರಾಹ್ಮಣ ಸಮಾಜದಲ್ಲಿ ವಿವಾಹ ವ್ಯವಸ್ಥೆ, ಜಪ-ತಪ ಅನುಷ್ಠಾನ, ಸಂಸ್ಕೃತಿ ಹಾಗೂ ಸಂಸ್ಕಾರದಲ್ಲೂ ಸಹ ತನ್ನ ಮೂಲಸತ್ವ ಮಾಯವಾಗತೊಡಗಿದೆ. ಬ್ರಾಹ್ಮಣ ಸಮಾಜ ಅಧೋಗತಿಯತ್ತ ಸಾಗುತ್ತಿದೆ. ಎಲ್ಲ ಮತಭೇದಗಳನ್ನೂ ಪ್ರಸ್ತುತ ಕಾಲಟ್ಟದಲ್ಲಿ ಬದಿಗಿಟ್ಟು ಬ್ರಾಹ್ಮಣ್ಯದ ರಕ್ಷಣೆಗೆ ಎಲ್ಲ ಬ್ರಾಹ್ಮಣರೂ ಒಗ್ಗಾಟಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.

ಉಡುಪಿ ಶ್ರೀಕೃಷ್ಣ ಮಠಕ್ಕೆ ಏ.7ರಂದು ಆಗಮಿಸಿದ್ದ ಬಾಳೆಕುದ್ರು ಮಠದ ವಾಸುದೇವ ಸದಾಶಿವ ಆಶ್ರಮ ಸ್ವಾಮೀಜಿಯನ್ನು ಸ್ವಾಗತಿಸಿ, ಅವರಿಗೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿಸಿ, ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ದುಷ್ಟರ ನಿಗ್ರಹವಾಗಲಿ

ಬಾಳೆಕುದ್ರು ಶ್ರೀ ಮಾತನಾಡಿ, ನಮ್ಮ ಮಠಕ್ಕೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞ ಅತ್ಯಂತ ಅರ್ಥಪೂರ್ಣ. ನಮ್ಮ ಭಾಗದಲ್ಲಷ್ಟೇ ಅಲ್ಲದೆ, ವಿಶ್ವಾದ್ಯಂತ ಭಕ್ತಿ ಸಿದ್ಧಾಂತ, ಭಾಗವತ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮಠವೂ ಸಹ ಭಾಗವತ ಸಂಪ್ರದಾಯದ್ದೇ ಆಗಿದ್ದು, ನಾವು ನರಸಿಂಹನ ಆರಾಧನೆ ಮಾಡುತ್ತೇವೆ. ಆತನ ಅನುಗ್ರಹದಿಂದ ಹಿರಣ್ಯಕಶಿಪುವಿನಂತಹ ದುಷ್ಟರ ಸಂಹಾರವಾಗಲಿ. ಸಮಾಜಕ್ಕೆ ಯತಿಗಳ ಮಾರ್ಗದರ್ಶನ ಈ ಹಿಂದೆಗಿಂತಲೂ ಈಗ ಹೆಚ್ಚಿನ ಅಗತ್ಯತೆ ಇದೆ ಎಂದರು.
ಗೀತಾ ಮಂದಿರದಲ್ಲಿ ವಿಪ್ರ ಸಮುದಾಯದ ಮಕ್ಕಳಿಗಾಗಿ ಪುತ್ತಿಗೆ ಮಠದಿಂದ ಆಯೋಜಿಸಿರುವ ವಸಂತ ಧಾರ್ಮಿಕ ಶಿಬಿರಕ್ಕೂ ಭೇಟಿ ನೀಡಿದ ಬಾಳೆಕುದ್ರು ಶ್ರೀಗಳು, ಮಕ್ಕಳಿಗೆ ಹಿತವಚನ ನುಡಿದರು. ಪುತ್ತಿಗೆ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ ಆಚಾರ್ಯ, ರತೀಶ ತಂತ್ರಿ ಹಾಗೂ ಮಠದ ವಿದ್ವಾಂಸರು ಉಪಸ್ಥಿತರಿದ್ದರು.