ಚಿತ್ರದುರ್ಗ:ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲರ ವಸತಿಗಾಗಿ ಜಮೀನು ಮಂಜೂರು ಮಾಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನೇತೃತ್ವದಲ್ಲಿ ಕೃಷಿ ಮಾರುಕಟ್ಟೆ ಹಮಾಲರ ಸಂಘದಿಂದ ಡಿಸಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ ಶಾಸಕರು,ಚಿತ್ರದುರ್ಗ ಎಪಿಎಂಸಿಯಲ್ಲಿ ಮಹಿಳೆ ಮತ್ತು ಪುರುಷ ಸೇರಿ 960 ಹಮಾಲ ರಿದ್ದಾರೆ. ಇವರೆಲ್ಲರೂ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಸ್ವಂತ ನಿವೇಶನವಿಲ್ಲ.
15-20 ವರ್ಷಗಳ ಹಿಂದೆ 133 ಮಹಿಳೆಯರಿಗೆ ಮತ್ತು 114 ಪುರುಷ ಹಮಾಲರಿಗೆ ನಿವೇಶನ ಮತ್ತು ಮನೆ ಹಂಚಿಕೆ ಮಾಡಲಾಗಿದೆ. ಅವರು ಈಗ ಈ ಮನೆಗಳಲ್ಲಿ ವಾಸವಿದ್ದಾರೆ. ಉಳಿದಿರುವ 960 ಹಮಾಲರ ವಸತಿ ಸಮಸ್ಯೆಯನ್ನು ನಿವಾರಿಸ ಬೇಕಿದೆ. ಚಿತ್ರದುರ್ಗ ತಾ ಲೂಕು ತಮಟಕಲ್ಲು ಮತ್ತು ಗುಡ್ಡದರಂಗನಹಳ್ಳಿ ವ್ಯಾಪ್ತಿಯಲ್ಲಿ ಜಮೀನು ಮಾಲೀಕರು ಮಾರಾಟಕ್ಕೆ ಬಯಸಿದ್ದಾರೆ.
ತಾವು ಪರಿಶೀಲಿಸಿ ಅಂದಾಜು 25 ಎಕರೆ ಜಮೀನನ್ನು ಸರ್ಕಾರದಿಂದ ಖರೀದಿ ಮಾಡಿ,ಹಮಾಲರ ಸಂಘಕ್ಕೆ ಮಂಜೂರ ಮಾಡ ಬೇಕು ಹಾಗೂ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ವಸತಿ ನಿರ್ಮಿಸಿಕೊಡುವಂತೆ ಶಿಫಾರಸ್ಸು ಮಾಡಬೇಕೆಂದರು. ಸರ್ಕಾರಿ ಜಮೀನು ಇದೆಯೇ ಅಥವಾ ಖರೀದಿಸಬೇಕೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವುದಾಗಿ ಡಿಸಿ ತಿಳಿಸಿದರು.
ತಹಸೀಲ್ದಾರ್ ಸತ್ಯನಾರಾಯಣ್, ತಾಪಂ ಇಒ ಹನುಮಂತಪ್ಪ,ಹಮಾಲರ ಸಂಘದ ಅಧ್ಯಕ್ಷ ಬಸವರಾಜಪ್ಪ, ದುರ್ಗೆಶ್,ಚಂದ್ರಪ್ಪ, ಕಣ್ಮೇಶ್,ಪ್ರಸನ್ನ,ಮೌನೇಶ್,ತಿಮ್ಮೇಶ್,ನಾಗರಾಜ್ ಮತ್ತಿತರರು ಇದ್ದರು.