ಮಡಿಕೇರಿ:
ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಮಧುಕೃಪದ ಆವರಣದಲ್ಲಿ ’ಬಾಲಗೋಕುಲ.’ ಮಡಿಕೇರಿ ವತಿಯಿಂದ ಏ.೩ರಿಂದ ಏ. ೯ರವರಗೆ ಮಕ್ಕಳಿಗಾಗಿ ವಸಂತ ಶಿಬಿರ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಐದರಿಂದ ಹದಿನೈದು ವಯಸ್ಸಿನ ಐವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.
ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ ಹಲವಾರು ನುರಿತ ವ್ಯಕ್ತಿಗಳು ಮಕ್ಕಳಿಗೆ ಅಮೃತ ವಚನ, ಶ್ಲೋಕಗಳು, ಕಬೀರನ ದೋಹಗಳು, ಗಾದೆಗಳು, ಒಗಟುಗಳು, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆಗಳು, ಅಭಿನಯ ಗೀತೆಗಳು, ದೇಶಿಯ ಆಟಗಳು, ಯೋಗಾಸನ, ಸಂಗೀತ, ಕ್ರಾಫ್ಟ್ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರೊಂದಿಗೆ ಮರೆಯಾಗುತ್ತಿರುವ ದೇಶಿಯ ಆಟಗಳನ್ನು ಮಕ್ಕಳು ಆಡಿ ಸಂಭ್ರಮಿಸಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡಗು ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ಇಂದಿನ ಸಮಾಜದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯ ಕೊರತೆ ಬಹಳಷ್ಟು ಇದೆ. ಇದನ್ನು ಹೋಗಲಾಡಿಸಲು ಬಾಲ ಗೋಕುಲದಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಅನಿವಾರ್ಯಎಂದರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು ತಮ್ಮ ತಮ್ಮ ಮನೆಯಲ್ಲಿ ಆಹಾರ ಸಿದ್ದಪಡಿಸಿಕೊಂಡು ಬಂದು ಎಲ್ಲರೂ ಒಟ್ಟಾಗಿ ಮಾತೃಭೋಜನ ಸೇವಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.